ಬೆಂಗಳೂರು: ಕೋವಿಡ್-19 ಮೂರು ಅಲೆಗಳ ನಂತರ ನಾಡಿನಾದ್ಯಂತ ಯುಗಾದಿ ಸಂಭ್ರಮ ಗರಿಗೆದರಿದೆ. ಹಬ್ಬದ ಮರುದಿನವಾದ ಇಂದು ಹೊಸ ತೊಡಕಿಗೆ ಮಾಂಸ ಖರೀದಿಸಲು ನಗರದ ಗ್ರಾಹಕರು ಮಟನ್ ಅಂಗಡಿಗಳ ಮುಂದೆ ಬೆಳಗಿನಿಂದಲೇ ಕ್ಯೂ ನಿಂತಿದ್ದಾರೆ. ಅದರಲ್ಲೂ, ನಗರದ ಪ್ರಸಿದ್ಧ ಪಾಪಣ್ಣ ಮಟನ್ ಸ್ಟಾಲ್ ಮುಂದೆ ಗ್ರಾಹಕರು ಕಿ.ಮೀ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಮಟನ್ ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿದೆ.
ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಪಾಪಣ್ಣ ಮಟನ್ ಸ್ಟಾಲ್ನಲ್ಲಿ ಮಟನ್ ಖರೀದಿಸುವವರ ಸಂಖ್ಯೆ ಹೆಚ್ಚು. ಸಿಲಿಕಾನ್ ಸಿಟಿಯ ಮೂಲೆ ಮೂಲೆಗಳಿಂದಲೂ ಜನರು ಇಲ್ಲಿಗೆ ಆಗಮಿಸಿ ಸರತಿ ಸಾಲಲ್ಲಿ ನಿಂತು ಮಾಂಸ ಖರೀದಿಸುತ್ತಾರೆ. ಉತ್ತಮ ಗುಣಮಟ್ಟ ಮತ್ತು ತಾವು ಕೇಳಿದಂತೆ ಮಟನ್ ನೀಡುತ್ತಾರೆ ಎಂಬ ಕಾರಣಕ್ಕೆ ಬೆಲೆ ಕೊಂಚ ಹೆಚ್ಚಾದರೂ ಗ್ರಾಹಕರು ಇಲ್ಲಿ ಸರತಿ ಸಾಲಲ್ಲಿ ನಿಂತು ಮಟನ್ ಖರೀದಿಸುವರು.
74 ವರ್ಷಗಳ ಇತಿಹಾಸ: ಪಾಪಣ್ಣ ಮಟನ್ ಸ್ಟಾಲ್ ಸಿಬ್ಬಂದಿ ಗ್ರಾಹಕರು ಮತ್ತು ವ್ಯಾಪಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತೆವಹಿಸಿ ಸಿದ್ಧತೆ ನಡೆಸಿದ್ದಾರೆ. ಸುಮಾರು 74 ವರ್ಷಗಳ ಇತಿಹಾಸವಿರುವ ಈ ಅಂಗಡಿಯನ್ನು ಮೂರು ತಲೆಮಾರಿನಿಂದ ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಪಾಪಣ್ಣರ ಮೊಮ್ಮಗ ರೋಹಿತ್ ಉಸ್ತುವಾರಿ ವಹಿಸಿಕೊಂಡಿದ್ದಾರೆ.
'ಆಯ್ದ, ಉತ್ತಮ ಗುಣಮಟ್ಟದ ಕುರಿಗಳನ್ನು ಮಾತ್ರ ನಾವು ಮಾಂಸಕ್ಕೆ ಬಳಕೆ ಮಾಡುತ್ತೇವೆ. ಕುರಿಗಳನ್ನು ಕನಕಪುರ, ರಾಮನಗರ, ಗೌರಿಬಿದನೂರು ಮತ್ತು ಮಾಗಡಿಯಿಂದ ಆರಿಸಿ ತರಲಾಗುತ್ತದೆ. ಪ್ರತಿ ವರ್ಷ ಹೊಸ ತೊಡಕಿನ ದಿನ ಸರಾಸರಿ 1,500 ಕಿಲೋ ಮಟನ್ ಮಾರಾಟವಾಗುತ್ತದೆ' ಎಂದು ರೋಹಿತ್ ತಿಳಿಸಿದ್ದಾರೆ.
ಇದನ್ನೂ ಓದಿ: ಯುಗಾದಿ ಪ್ರಯುಕ್ತ ನಡೆಯುವ ಕೂಡ್ಲಿ ಸಂಗಮೇಶ್ವರ ಜಾತ್ರೆಗೆ ಚಾಲನೆ