ಬೆಂಗಳೂರು: ದೆಹಲಿಯಿಂದ ವಿಶೇಷ ರೈಲಿನಲ್ಲಿ ಬೆಂಗಳೂರಿಗೆ ಇಂದು ಬಂದಿದ್ದ ಪ್ರಯಾಣಿಕರ ಪೈಕಿ ಕ್ವಾರಂಟೈನ್ಗೆ ಒಳಗಾಗಲು ಒಪ್ಪದ ಕಾರಣ ಸುಮಾರು 19 ಪ್ರಯಾಣಿಕರು ಮತ್ತೆ ದೆಹಲಿಗೆ ಹೋಗುವ ರೈಲು ಹತ್ತಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ದೆಹಲಿಯಿಂದ 500ಕ್ಕೂ ಹೆಚ್ಚು ಪ್ರಯಾಣಿಕರು ವಿಶೇಷ ರೈಲಿನ ಮೂಲಕ ಬಂದಿಳಿಯುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಕ್ವಾರಂಟೈನ್ಗೆ ಒಳಗಾಗುಂತೆ ಸೂಚಿಸಿದ್ದರು. ಇದಕ್ಕೆ ಗರಂ ಆದ ಪ್ರಯಾಣಿಕರು, ಕ್ವಾರಂಟೈನ್ಗೆ ಒಳಪಡುವುದಿಲ್ಲ ಎಂದು ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಮಧ್ಯಪ್ರವೇಶಿಸಿದ ರೈಲ್ವೆ ಇಲಾಖೆಯ ಐಜಿಪಿ ಡಿ.ರೂಪಾ ಪರಿಸ್ಥಿತಿಯನ್ನು ತಿಳಿಗೊಳಿಸಿ ಹಲವರನ್ನು ಕ್ವಾರಂಟೈನ್ಗೆ ಒಳಗಾಗುವಂತೆ ಮನವೊಲಿಸಿದರು. ಮತ್ತೊಂದು ಪ್ರಯಾಣಿಕರ ಗುಂಪು ಇದಕ್ಕೆ ಒಪ್ಪದ ಕಾರಣ ಪರ್ಯಾಯ ಮಾರ್ಗವಾಗಿ ಅವರ ಬೇಡಿಕೆಯಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಪ್ರಯಾಣಿಕರನ್ನು ವಾಪಸ್ ಕಳುಹಿಸಲು ನಿರ್ಧರಿಸಲಾಯಿತು.
ನೈರುತ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಇಂದು ರಾತ್ರಿ ರಾಜಧಾನಿಯಿಂದ ಹೋಗಬೇಕಿದ್ದ ದೆಹಲಿ ವಿಶೇಷ ರೈಲಿಗೆ ಹೆಚ್ಚುವರಿಯಾಗಿ ಬೋಗಿ ಅಳವಡಿಸಿ ವಾಪಸ್ ಹೋಗುವ ವ್ಯವಸ್ಥೆ ಮಾಡಲಾಯಿತು. ಧರ್ಮಾವರಂ, ಸಿಕಂದರಾಬಾದ್ ಸೇರಿದಂತೆ ವಿವಿಧ ಪ್ರಯಾಣಿಕರು ಮತ್ತೆ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋಗುತ್ತಿದ್ದಾರೆ.