ಬೆಂಗಳೂರು: ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದುರಾಗಿದ್ದು, ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನರು ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ಕಣ್ಣಿನ ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಸಿಗದೇ ಜನರು ನಿತ್ಯ ಎಡತಾಕುತ್ತಿದ್ದಾರೆ. ಇಎಸ್ಐ ಅಡಿ ಹೆಸರು ನೋಂದಾಯಿಸಿಕೊಳ್ಳುತ್ತಿರುವ ಜನರ ಸಂಖ್ಯೆ ಏರುತ್ತಲೇ ಇದೆ. ಆದರೆ, ವೈದ್ಯರ ಕೊರೆತೆಯಿಂದ ಜನರು ದಿನಗಟ್ಟಲೆ ಕಾಯಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.
ಇಂದು ಬೆಳಗ್ಗೆ ಸಹ ಆಸ್ಪತ್ರೆಗೆ ಬಂದ ಜನರು ವೈದ್ಯರು ದೊರೆಯದೇ ಮಧ್ಯಾಹ್ನದವರೆಗೂ ಕಾದು ಕಾದು ಸುಸ್ತಾದರು. ಆಸ್ಪತ್ರೆಯ ನೇತ್ರಾ ಚಿಕಿತ್ಸಾ ವಿಭಾಗದಲ್ಲಿ ಆರು ಜನ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಮೂವರು ವೈದ್ಯರು ರಜೆ ಹಾಕಿದ್ದೇ, ರೋಗಿಗಳ ಪರದಾಟಕ್ಕೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ಸುಮಾರು 11 ಲಕ್ಷ ಇಎಸ್ಐ ನೋಂದಾಯಿತ ಸದಸ್ಯರಿದ್ದಾರೆ. 200 ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ವೇಟಿಂಗ್ ಲಿಸ್ಟ್ ರೂಪಿಸಿ, ಚಿಕಿತ್ಸೆ ನೀಡಲಾಗ್ತಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಕೇವಲ 500 ಬೆಡ್ಗಳ ವ್ಯವಸ್ಥೆಯಿದ್ದು, ಕನಿಷ್ಠ 1,200 ಬೆಡ್ಗಳ ಅಗತ್ಯವಿದೆ.
ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದ್ದ ಇಎಸ್ಐ ಆಸ್ಪತ್ರೆಯಲ್ಲಿ ಇದೀಗ ವೈದ್ಯರ ಕೊರತೆಯಿಂದ ಸುದ್ದಿಯಾಗ್ತಿದೆ. ಈ ಮಧ್ಯೆ ಇಲ್ಲಿನ ವೈದ್ಯರನ್ನ ಬೇರೆಡೆಗೆ ವರ್ಗಾವಣೆ ಮಾಡುವ ಪ್ರಕರಣವೂ ಸದ್ಯ ಕೋರ್ಟಿನಲ್ಲಿದೆ. ರೋಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದು ಎಲ್ಲ ರೀತಿಯಲ್ಲೂ ಸಂಕಷ್ಟ ತಂದೊಡ್ಡಿದೆ.