ನೆಲಮಂಗಲ : ನೀರಿನ ಪೈಪ್‌ಲೈನ್ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯೆ ಕುಟುಂಬ ಮತ್ತು ಬಿಜೆಪಿ ಮುಖಂಡನ ನಡುವೆ ಜಗಳವಾಗಿದೆ. ಎರಡು ಕುಟುಂಬಗಳ ಸದಸ್ಯರು ಕೈಯಲ್ಲಿ ಕುಡುಗೋಲು,ಹಾರೆ, ಕೋಲು ಹಿಡಿದು ಕೈಕೈ ಮಿಲಾಯಿಸಿದ್ದಾರೆ. ಸದ್ಯ ಇಬ್ಬರ ನಡುವಿನ ಮಾರಾಮಾರಿ ದೃಶ್ಯ ವೈರಲ್ ಆಗಿದೆ.
ಯಲಹಂಕ ತಾಲೂಕಿನ ಹೆಸರಘಟ್ಟದಲ್ಲಿ ಈ ಘಟನೆ ನಡೆದಿದೆ. ಹೆಸರಘಟ್ಟ ಗ್ರಾಮ ಪಂಚಾಯತ್‌ನ ವಾರ್ಡ್ 3ರಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ ಸುಧಾ ಕಾಮಗಾರಿ ಪರಿಶೀಲನೆಗೆ ಹೋಗಿದ್ದಾರೆ.
ಈ ಸಮಯದಲ್ಲಿ ಕಾಮಗಾರಿ ಲೋಪದ ಬಗ್ಗೆ ಗುತ್ತಿಗೆದಾರನನ್ನು ಪಂಚಾಯತ್ ಸದಸ್ಯೆ ಸುಧಾ ಪ್ರಶ್ನಿಸಿದ್ದಾರೆ. ಈ ನಡುವೆ ವಿನಾಕಾರಣ ಮಧ್ಯಪ್ರವೇಶಿಸಿದ ಬಿಜೆಪಿ ಮುಖಂಡ ನಾಗರಾಜು ಕ್ಯಾತೆ ತೆಗೆದಿದ್ದಾನೆ.
ಈ ವೇಳೆ ಸುಧಾ ತನ್ನ ಗಂಡ ದೇವರಾಜ್‌ನನ್ನು ಕರೆಸಿದ್ದಾರೆ. ನಾಗರಾಜ್ ಮತ್ತು ಆತನ ಮಕ್ಕಳಾದ ಭರತ್, ಚರಣ್, ವರುಣ್, ಕುಡುಗೋಲು, ಹಾರೆ, ಕೋಲು, ಹಿಡಿದು ಹಲ್ಲೆಗೆ ಮುಂದಾಗಿದ್ದಾರೆ. ಈ ಸಮಯದಲ್ಲಿ ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದಾಗ ಮೊಬೈಲ್ ಕಿತ್ತುಕೊಂಡು ಹೊಡೆದು ಹಾಕಿರುವುದಾಗಿ ಹೇಳಲಾಗಿದೆ.
ಘಟನಾ ಸಂಬಂಧ ಸೊಲದೇವನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗರಾಜ್ ಮತ್ತು ಆತನ ಮಕ್ಕಳನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಓದಿ : ಉಕ್ರೇನ್ನಲ್ಲಿ ತುಮಕೂರು ವಿದ್ಯಾರ್ಥಿನಿ.. ಮಗಳನ್ನು ನೆನೆದು ಪೋಷಕರ ಕಣ್ಣೀರು..