ಬೆಂಗಳೂರು: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕ್ರೀಡಾಪಟುಗಳಿಗೆ ಕೆಲವು ಸಲಹೆ ಕೂಡ ನೀಡಿದ್ದಾರೆ.
ಭಾನುವಾರ ನಗರದಲ್ಲಿ ಮ್ಯಾಜೆಸ್ಟೈನ್ ಸ್ಪೋರ್ಟ್ಸ್ ಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಕ್ರೀಡೆಯಾದರೂ ಸರಿ ಕ್ರೀಡಾಪಟುಗಳು ಹಾರ್ಡ್ ವರ್ಕ್ ಮಾಡಬೇಕು. ನಿರಂತರ ಅಭ್ಯಾಸದಲ್ಲಿ ತೊಡಗಬೇಕು. ನಾನು ಒಂದು ದಿನಕ್ಕೆ ಸುಮಾರು 6 ರಿಂದ 7 ಗಂಟೆಗಳ ಕಾಲ ವರ್ಕೌಟ್, ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತೇನೆ ಎಂದು ತಿಳಿಸಿದರು.
ಪೋಷಕರ ಪ್ರೋತ್ಸಾಹದಿಂದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಸಾಧನೆ ಮಾಡಲು ಸಹಾಯವಾಯಿತು. ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಅವರು ನನಗೆ ಸುಮಾರು ವರ್ಷಗಳಿಂದ ತರಬೇತಿ ನೀಡುತ್ತಿದ್ದಾರೆ. ಅವರ ತರಬೇತಿಯಿಂದ ವರ್ಷದಿಂದ ವರ್ಷಕ್ಕೆ ಪ್ರಗತಿ ಹೊಂದುತ್ತಿದ್ದೇನೆ ಎಂದು ಹೇಳಿದರು. ಸ್ಪೋರ್ಟ್ಸ್ ಕ್ಲಬ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾಗಬೇಕು. ಇದರಿಂದ ಎಲ್ಲ ರೀತಿಯ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಅಷ್ಟೇ ಅಲ್ಲದೇ ಉತ್ತಮ ಕ್ರೀಡಾ ವಾತಾವರಣ ನಿರ್ಮಾಣವಾಗುತ್ತದೆ. ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದೆ. ಆಗ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರದಿಂದ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ. ಕೆಲವು ದಿನಗಳಲ್ಲಿ ಬ್ಯಾಡ್ಮಿಂಟನ್ ಪಂದ್ಯವು ಚೀನಾದಲ್ಲಿ ನಡೆಯಲಿದೆ. ಅದರಲ್ಲಿ, ಉತ್ತಮ ಪ್ರದರ್ಶನ ನೀಡುತ್ತೇನೆ ಎಂಬ ಭರವಸೆ ಇದೆ ಎಂದು ತಿಳಿಸಿದರು. ಬೆಂಗಳೂರು ಅದ್ಭುತ ನಗರ. ಬ್ಯಾಡ್ಮಿಂಟನ್ ಪಂದ್ಯಗಳ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಾಗ ಭೇಟಿ ನೀಡುತ್ತೇನೆ. ಇಲ್ಲಿನ ವಾತಾವರಣ ನನಗೆ ಬಹಳ ಇಷ್ಟವಾಯಿತು ಎಂದು ತಿಳಿಸಿದ್ದಾರೆ.
ಬಳಿಕ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಕಿಡಂಬಿ ಮಾತನಾಡಿ, ಕ್ರೀಡೆಗೆ ಉತ್ತಮ ಪ್ರೋತ್ಸಾಹ ಸಿಗುತ್ತದೆ. ಹೀಗಾಗಿ ಅನೇಕರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ತಿಳಿಸಿದರು.