ಬೆಂಗಳೂರು: ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ವಿಕಾಸಸೌಧದ 207ನೇ ಕೊಠಡಿಯಲ್ಲಿ ಕುಟುಂಬ ಸಮೇತ ಪೂಜೆ ನೆರವೇರಿಸಿ ತಮ್ಮ ಕಚೇರಿ ಪ್ರವೇಶ ಮಾಡಿದರು.
ನಂತರ ಮಾತನಾಡಿದ ಅವರು, ಅಧಿಕೃತವಾಗಿ ಇಂದು ಕಚೇರಿ ಪ್ರವೇಶಿಸಿದ್ದೇನೆ. ಅಧಿಕಾರಿಗಳ ಜೊತೆ ಇಲಾಖೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸುತ್ತೇನೆ ಎಂದರು. ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿ ಮಾಡಿಸುವುದು ನಮ್ಮ ಆದ್ಯತೆ. ಮೂರು ಸಕ್ಕರೆ ಕಾರ್ಖಾನೆಗಳನ್ನು ಪಿಪಿಪಿ ಆಧಾರದ ಮೇಲೆ ಮಾರಾಟ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ಪಾಂಡವಪುರ, ಕೊಪ್ಪ ಸಹಕಾರಿ ಕಾರ್ಖಾನೆ ಹಾಗೂ ಮಂಡ್ಯದ ಮೈ ಶುಗರ್ ಕಾರ್ಖಾನೆಗಳನ್ನು ಖಾಸಗಿಯವರಿಗೆ ಕೊಡಲಾಗುತ್ತದೆ. ಜೂನ್ ಒಳಗೆ ಹಸ್ತಾಂತರ ಪ್ರಕ್ರಿಯೆ ಮುಗಿಸಿದರೆ ರೈತರು ಕಬ್ಬು ಸರಬರಾಜು ಮಾಡಲು ಅನುಕೂಲವಾಗುತ್ತದೆ. ಅದಕ್ಕೂ ಮೊದಲು ಅಲ್ಲಿನ ಕಾರ್ಮಿಕರು, ರೈತರು ಮತ್ತು ಜನಪ್ರತಿನಿಧಿಗಳ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು. ಎಲ್ಲಾ ಪಕ್ಷಗಳ ಶಾಸಕರೂ ಸಕ್ಕರೆ ಕಾರ್ಖಾನೆ ಮಾಲೀಕರಿದ್ದಾರೆ. ನಮ್ಮ ಪಕ್ಷದವರು ಸ್ವಲ್ಪ ಹೆಚ್ವಿನ ಸಂಖ್ಯೆಯಲ್ಲಿದ್ದಾರೆ. ಆದರೆ ಬಾಕಿ ಪಾವತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೇ ಕಾಯ್ದೆ ಜಾರಿಗೊಳಿಸಿದೆ. ಹಾಗಾಗಿ ನಮ್ಮ ಮೇಲೆ ಯಾವುದೇ ಒತ್ತಡ ಬರುವ ಪ್ರಶ್ನೆಯೇ ಬರುವುದಿಲ್ಲ ಎಂದರು.
ಕಾರ್ಮಿಕ ಇಲಾಖೆಯ ಹಣದ ಮೇಲೆ ಸರ್ಕಾರದ ಕಣ್ಣು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸತ್ಯಕ್ಕೆ ದೂರವಾದದು. ಕಾರ್ಮಿಕ ಇಲಾಖೆಯಿಂದ ಹಣ ಪಡೆಯುವ ಅಗತ್ಯ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಈಗಾಗಲೇ ಎಲ್ಲಾ ಇಲಾಖೆಗಳಲ್ಲಿ ಹೆಣ್ಣು ಮಕ್ಕಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ಕಾಯ್ದೆಗೆ ತಿದ್ದುಪಡಿ ಮಾಡಿ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಕೃಷಿ ಕಾರ್ಮಿಕರಿಗೂ ಉದ್ಯೋಗ ಕಾರ್ಡ್ ನೀಡುವ ಚಿಂತನೆ ಮಾಡಿದ್ದೇವೆ. ಮುಂಬರುವ ಬಜೆಟ್ನಲ್ಲಿ ಸಿಎಂ ಕಾರ್ಮಿಕ ಸ್ನೇಹಿ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.