ಬೆಂಗಳೂರು: ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮವಾಗಿದೆ. ಭ್ರಷ್ಟಾಚಾರ ಪೂರ್ವನಿಯೋಜಿತವಾಗಿ ಮಾಡಿದ ಕೃತ್ಯ. 28-29 ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಆದರೆ ಇಬ್ಬರು ಪೊಲೀಸರನ್ನು ಮಾತ್ರ ಬಂಧಿಸಿಲ್ಲ. ಈ ಅಕ್ರಮಕ್ಕೆ ಸರ್ಕಾರ ಹೊಣೆ. ಗೃಹ ಸಚಿವ ಆರಗ ಜ್ಞಾನೇಂದ್ರ ಈ ಅಕ್ರಮಕ್ಕೆ ನೇರವಾಗಿ ಹೊಣೆಯಾಗುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಫೆಬ್ರವರಿಯಲ್ಲಿ ಪತ್ರ ಬರೆದಿದ್ದಾರೆ. ಆದರೆ ಕ್ರಮ ಆಗಿಲ್ಲ. ಎಂಎಲ್ಸಿ ಸಂಕನೂರ್ ಸಹ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪರಿಷತ್ನಲ್ಲಿ ಸದಸ್ಯರಾದ ಶಶಿಲ್ ನಮೋಷಿ ಕೇಳಿದ ಪ್ರಶ್ನೆಗೆ ಸಹ ಕಲಾಪದಲ್ಲಿ ಉತ್ತರಿಸಲಾಗಿದ್ದು, ಗೃಹ ಸಚಿವರು ಪರೀಕ್ಷೆ ಸುಗಮವಾಗಿ ನಡೆದಿದೆ ಎಂದಿದ್ದಾರೆ.
ಕಾಂಗ್ರೆಸ್ ಸದಸ್ಯ ಎಸ್.ರವಿ ದೂರಿನ ಸಂಬಂಧ ಕೇಳಿದ ಪ್ರಶ್ನೆಗೆ 5 ಸದಸ್ಯರು ದೂರು ಸಲ್ಲಿಸಿದ್ದಾರೆ. ಅಭ್ಯರ್ಥಿಗಳು ಅರ್ಹತೆ ಮೇಲೆ ಅಂಕ ಸಂಪಾದಿಸಿದ್ದು, ಅಕ್ರಮ ನಡೆದಿಲ್ಲ ಎಂದಿದ್ದಾರೆ. ಯು.ಬಿ. ವೆಂಕಟೇಶ್, ಅರವಿಂದ ಕುಮಾರ್ ಅರಳಿ ಸಹ ಅಕ್ರಮ ಬಗ್ಗೆ ಕೇಳಿದ ಪ್ರಶ್ನೆಗೂ ಅಕ್ರಮ ನಡೆದಿಲ್ಲ ಎಂಬ ಉತ್ತರ ನೀಡಲಾಗಿದೆ. ಗೃಹ ಸಚಿವರು ಮಂತ್ರಿಯಾಗಿ ಮುಂದುವರಿಯಲು ಲಾಯಕ್ಕಲ್ಲ. ಅವರನ್ನು ಕೂಡಲೇ ಡಿಸ್ಮಿಸ್ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
'40 ಪರ್ಸೆಂಟ್ಗೆ ಭ್ರಷ್ಟಾಚಾರಕ್ಕೆ ಅಧಿಕೃತ ಮುದ್ರೆ': ರಾಜ್ಯದಲ್ಲಿ ನಡೆದಿರುವ 40 ಪರ್ಸೆಂಟ್ ಭ್ರಷ್ಟಾಚಾರಕ್ಕೆ ಕೇಂದ್ರ ಸರ್ಕಾರ ಅಧಿಕೃತ ಮುದ್ರೆ ಒತ್ತುವ ಕಾರ್ಯ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಮಂಗಳವಾರ ಅಮಿತ್ ಶಾ, ಅರುಣ್ ಸಿಂಗ್ ಬಂದು ಹೋಗಿದ್ದಾರೆ. ಬೊಮ್ಮಾಯಿ ಸರ್ಕಾರಕ್ಕೆ ಶಬ್ಬಾಸ್ಗಿರಿ ಕೊಟ್ಟಿದ್ದಾರೆ. ಅರುಣ್ ಸಿಂಗ್ ಅವರು ಜನಸಾಮಾನ್ಯರ ಮುಖ್ಯಮಂತ್ರಿ ಎಂದಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರು ಭ್ರಷ್ಟಾಚಾರಕ್ಕೆ ಸಹಮತ ನೀಡಿದಂತಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನ, ಗುತ್ತಿಗೆದಾರರು ಇದನ್ನು ಭ್ರಷ್ಟ ಸರ್ಕಾರ ಎಂದಿದ್ದಾರೆ. ಗುತ್ತಿಗೆದಾರರ ಸಂಘ ಪತ್ರ ಬರೆದಿದೆ. ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಿಎಸ್ಐ ನೇಮಕದಲ್ಲಿ ಅಕ್ರಮವಾಗಿದೆ. ಇದೆಲ್ಲಾ ಭ್ರಷ್ಟಾಚಾರ ಅಲ್ಲವೇ? ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದು 10 ತಿಂಗಳಾಗಿದೆ. ಇನ್ನೂ ತನಿಖೆಗೆ ಆದೇಶಿಸಿಲ್ಲ. ಕ್ರಮ ಕೈಗೊಂಡಿಲ್ಲ. ರಾಜ್ಯಕ್ಕೂ ಈ ಬಗ್ಗೆ ಮಾಹಿತಿ ಕೇಳಿಲ್ಲ. 40 ಪರ್ಸೆಂಟ್ ಸರ್ಕಾರದ ವಿರುದ್ಧ ಕ್ರಮ ಆಗುತ್ತಿಲ್ಲ.
ಈ ಹಿಂದೆ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭ ಪ್ರಧಾನಿಯೇ ನಮ್ಮ ಸರ್ಕಾರವನ್ನು 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದಿದ್ದರು. 'ನಾ ಕಾವುಂಗಾ, ನಾ ಕಾನೇದೂಂಗಾ' ಅಂತ ಹೇಳಿ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡಿದ್ದಾರೆ. ಭ್ರಷ್ಟಾಚಾರಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜ್ಯ ಉಸ್ತುವಾರಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಭ್ರಷ್ಟವಾಗಿರುವ ರಾಜ್ಯ ಸರ್ಕಾರದ ಬೆನ್ನು ತಟ್ಟಿ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
'ಉನ್ನತ ಶಿಕ್ಷಣ ಸಚಿವರ ಸಂಬಂಧಿಗಳಿಂದಲೂ ಅಕ್ರಮ': ಸರ್ಕಾರ ಇಂತಹ ಹಲವು ಹಗರಣದಲ್ಲಿ ಭಾಗಿಯಾಗಿದೆ. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ್ ಅವರು ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲಿ ಅಕ್ರಮದಲ್ಲಿ ಹೆಸರು ಬಂದಿದೆ. ಇಬ್ಬರ ಬಂಧನವಾಗಿದೆ. ಆದರೆ ಸಚಿವರನ್ನು ಬಿಡಲಾಗಿದೆ. ಅವರೇ ಇದಕ್ಕೆ ಉತ್ತರದಾಯಿತ್ವ ಅಗಿದ್ದಾರೆ. ಅವರ ಜವಾಬ್ದಾರಿ ಏನು?. ಇದರಿಂದ ಗೃಹ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಿಬ್ಬರನ್ನೂ ಕೂಡಲೇ ವಜಾಗೊಳಿಸಬೇಕು. ಪಿಎಸ್ಐ ನೇಮಕದಲ್ಲೂ ಅಶ್ವಥ್ ನಾರಾಯಣ ಕೈವಾಡ ಇದೆ. ಆಯ್ಕೆಯಾದ ದರ್ಶನ್ ಗೌಡ, ನಾಗೇಶ್ ಗೌಡ ಇಬ್ಬರೂ ಸಚಿವರ ಸಂಬಂಧಿಗಳು. ಐದು ಮತ್ತು ಹತ್ತನೇ ಶ್ರೇಣಿ ಪಡೆದಿದ್ದಾರೆ. ದರ್ಶನ್ ಗೌಡನಿಗೆ ಬರೆಯುವುದರಲ್ಲಿ 50ಕ್ಕೆ 19 ಅಂಕ, ಟಿಕ್ ಮಾರ್ಕ್ ಮಾಡುವಲ್ಲಿ 150ಕ್ಕೆ 141 ಅಂಕ ಬಂದಿದೆ. ನಾಗೇಶ್ ಗೌಡ ಕ್ರಮವಾಗಿ 29 ಅಂಕ ಹಾಗೂ 128 ಅಂಕ ಪಡೆದಿದ್ದಾನೆ.
ದರ್ಶನ್ ಹಾಗೂ ನಾಗೇಶ್ರನ್ನು ವಿಚಾರಣೆಗೆ ಕರೆಸಿ ವಾಪಸ್ ಕಳುಹಿಸಲಾಗಿದೆ. ಒಬ್ಬ ಮಾಗಡಿ, ಇನ್ನೊಬ್ಬ ಕುಣಿಗಲ್ ನಿವಾಸಿ. ಉಳಿದವರನ್ನು ಬಂಧಿಸಿರುವಾಗ ಇವರೇಕೆ ತಕ್ಷಣ ಬಿಡುಗಡೆಯಾದರು?. ಇವರಿಂದ ಪಡೆದ ಮಾಹಿತಿ ಏನು?. ಕರೆಸಿದ್ದು ಏಕೆ? ಯಾಕೆ ಬಿಟ್ಟು ಕಳಿಸಲಾಗಿದೆ? ಅವರು ಸಾಕ್ಷಿಗಳಲ್ಲ, ಆರೋಪಿಗಳು. ಸರ್ಕಾರದ ಒತ್ತಡ ಇಲ್ಲದೇ ಇದಾಗಲು ಸಾಧ್ಯವಾ? ಅಶ್ವಥ್ ನಾರಾಯಣ್ ಮೇಲೆ ಬಲವಾದ ತೂಗುಗತ್ತಿ ನೇತಾಡುತ್ತಿದೆ. ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
'ನ್ಯಾಯಾಂಗ ತನಿಖೆ ಆಗಬೇಕು': ಒಟ್ಟು 300 ಕೋಟಿಗೂ ಅಧಿಕ ಮೌಲ್ಯದ ಭ್ರಷ್ಟಾಚಾರ ನಡೆದಿದೆ. ಸಿಐಡಿ ತನಿಖೆ ನಡೆಯುತ್ತಿದೆ. ಸರ್ಕಾರ, ಮಂತ್ರಿಗಳು, ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವುದರಿಂದ ಸಿಐಡಿ ತನಿಖೆ ಸೂಕ್ತವಲ್ಲ. ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ಆಗಬೇಕು. ಸಹಾಯಕ ಪ್ರಾಧ್ಯಾಪಕರ ನೇಮಕ ವಿಚಾರದಲ್ಲಿಯೂ ಸೂಕ್ತ ತನಿಖೆ ಪ್ರಗತಿಯಲ್ಲಿಲ್ಲ. ಇದನ್ನೂ ನ್ಯಾಯಾಂಗ ತನಿಖೆಗೆ ಸೇರಿಸಲಿ. ಜನಸಾಮಾನ್ಯರ ಪೀಡಕ, ಸುಲಿಗೆ ಸರ್ಕಾರ ಆಗಿದೆ. ಮೋದಿ ಮುಂದೆಯಾದರೂ ನಾಟಕವಾಡುವುದನ್ನು ಬಿಟ್ಟು ತಮ್ಮ ಮಾತಿಗೆ ಬೆಲೆ ಬರಬೇಕೆಂದರೆ ಕೂಡಲೇ ತನಿಖೆಗೆ ಸೂಚಿಸಬೇಕು ಎಂದರು.
ಇದನ್ನೂ ಓದಿ: ಅಷ್ಟು ಹಣ ಎಲ್ಲಿಂದ ತರೋಕಾಗುತ್ತೆ?: ಪಿಎಸ್ಐ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ರಚನಾ ಕುಟುಂಬಸ್ಥರ ಅಳಲು!