ಬೆಂಗಳೂರು: ಪಿಎ ಆಗಲಿ, ಯಾರೇ ಆಗಿರಲಿ.. ಕಾನೂನು ಪ್ರಕಾರ ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿರುವ ಗಂಭೀರ ಆರೋಪದ ಮೇಲೆ ಸಚಿವರ ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧಿಸಿರುವ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಅವನ ಪಿಎ ಆಗಲಿ, ಯಾರೇ ಆಗಲಿ, ಕಾನೂನು ಪ್ರಕಾರ ಕ್ರಮ ಆಗಲೇಬೇಕು ಎಂದರು.
ಗ್ಯಾಸ್ ಬೆಲೆ ಏರಿಕೆಗೆ ಅಸಮಾಧಾನ:
ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಜನಜೀವನ ಹಾಳು ಮಾಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ, ಜನರ ಜೀವನ ಮಟ್ಟ ಕುಸಿದಿದೆ. ಪೆಟ್ರೋಲ್, ಡೀಸೆಲ್ ಹಾಗೂ ಈಗ ಗ್ಯಾಸ್ ಬೆಲೆ ಕೂಡ ಏರಿಸುತ್ತಲೇ ಇದ್ದಾರೆ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಕೋಟ್ಯಂತರ ರೂಪಾಯಿ ವಸೂಲಿ ಆರೋಪ: ಸಚಿವ ಶ್ರೀರಾಮುಲು ಆಪ್ತ ಸಹಾಯಕ ಅರೆಸ್ಟ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ನೀಡಿದ ದೂರಿನ ಮೇರೆಗೆ ಸಚಿವರ ಪಿಎ ರಾಜು ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಹಲವು ವರ್ಷಗಳಿಂದ ಶ್ರೀರಾಮುಲು ಹಾಗೂ ರೆಡ್ಡಿ ಕುಟುಂಬದ ಜೊತೆ ರಾಜು ಗುರುತಿಸಿಕೊಂಡಿದ್ದರು.