ಬೆಂಗಳೂರು: ಆರ್ಎಸ್ಎಸ್ ಸಂಸ್ಕೃತಿ ಹೀನವಾದ, ಹೇಯವಾದ ಸಂಸ್ಕೃತಿ. ಇಲ್ಲಿ ಈಶ್ವರಪ್ಪರಂತಹ ಹರಕುಬಾಯಿ ದಾಸರೇ ಹೆಚ್ಚಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಂವಿಧಾನ ಬುಡಮೇಲು ಮಾಡುವುದು, ರಾಷ್ಟ್ರಧ್ವಜ ಬದಲಾಯಿಸುವುದು ಇವೆಲ್ಲ ಅವರ ಗುಪ್ತಸೂಚಿ. ಇವರಿಂದ ದೇಶ ಹಾಗೂ ರಾಜ್ಯದ ಉತ್ತಮ ಭವಿಷ್ಯವನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಕಿಡಿ ಕಾರಿದರು.
ಸಚಿವ ಕೆ.ಎಸ್ ಈಶ್ವರಪ್ಪ ಒಬ್ಬ ಹರಕು ಬಾಯಿ ದಾಸ. ಇವರಷ್ಟೇ ಅಲ್ಲ, ಇಡೀ ದೇಶದಲ್ಲಿ ಈಶ್ವರಪ್ಪರಂತಹ ಹರಕುಬಾಯಿ ದಾಸರೇ ತುಂಬಿದ್ದಾರೆ. ಅದು ಬಚ್ಚಲು ಬಾಯಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ಎಸ್ಎಸ್ ಸಂಸ್ಕೃತಿಯೇ ಅಂತದ್ದು. ಅದನ್ನು ಮೈಗೂಡಿಸಿ ಬಂದವರು ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆ. ಈಶ್ವರಪ್ಪ ಜೊತೆಗೆ ಆರ್ಎಸ್ಎಸ್ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿಂತಿರುವುದರಿಂದ ಅವರಿಗೆ ಇಷ್ಟೊಂದು ಧೈರ್ಯ ಬಂದಿದೆ. ಇದು ದೊಡ್ಡ ದುರಂತ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಪ್ರತಿ ಪಕ್ಷವಾಗಿಯೂ ನೈತಿಕತೆ ಕಳೆದುಕೊಂಡ ಕಾಂಗ್ರೆಸ್: ಸಿಎಂ ಬೊಮ್ಮಾಯಿ ವಾಗ್ದಾಳಿ
ನಾನು ಈ ಭಾರತ ದೇಶದ ನಾಗರಿಕ. ಸ್ವತಂತ್ರ ಭಾರತದ ಮೇಲೆ ನಂಬಿಕೆ ಇಟ್ಟುಕೊಂಡಿರುವವನು. ಎಷ್ಟೆಷ್ಟೋ ಈಶ್ವರಪ್ಪರಂಥವರು ಹೋಗಿ ಬಿಟ್ಟಿದ್ದಾರೆ. ಈಗ ಈಶ್ವರಪ್ಪ ಹೋಗೋದಿಲ್ವಾ ಎಂದು ಪ್ರಶ್ನಿಸಿದರು.