ನೆಲಮಂಗಲ(ಬೆಂಗಳೂರು): ಪ್ರಸಕ್ತ ಶೈಕ್ಷಣಿಕ ವರ್ಷದ ಪೂರ್ಣ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ತಮ್ಮ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನಿಲ್ಲಿಸಿದ್ದಾರೆ ಎಂದು ಆರೋಪಿಸಿ ಚಿಕ್ಕಬಾಣಾವರದ ಖಾಸಗಿ ಶಾಲೆಯ ಕ್ರಮವನ್ನು ಖಂಡಿಸಿ ಕೆಲ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಈಗಾಗಲೇ ಕೊರೊನಾದಿಂದ ಬಹುತೇಕ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಕೆಲಸಗಳಿಲ್ಲದೇ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ಮಧ್ಯೆ ಖಾಸಗಿ ಶಾಲೆಗಳು ಅಮಾನವೀಯವಾಗಿ ವರ್ತಿಸುತ್ತಿವೆ. ಎರಡನೇ ಕಂತಿನ ಶುಲ್ಕ ಕಟ್ಟಿಲ್ಲ ಎಂದು ಆನ್ಲೈನ್ ಕ್ಲಾಸ್ನಿಂದ ಬ್ಲಾಕ್ ಮಾಡಿದ್ದಾರೆ ಎಂದು ಪೋಷಕರು ತಮ್ಮ ಆರೋಪಿಸಿದ್ದಾರೆ.
ಆನ್ಲೈನ್ ಕ್ಲಾಸ್ನಿಂದ ತಮ್ಮ ಮಕ್ಕಳನ್ನು ಬ್ಲಾಕ್ ಮಾಡಿದ್ದನ್ನು, ಪ್ರಶ್ನಿಸಲು ಹೋದ ಪೋಷಕರನ್ನು ಶಾಲೆಯಿಂದ ಹೊರಹಾಕುವಂತೆ ಭದ್ರತಾ ಸಿಬ್ಬಂದಿಗೆ ಮಂಡಳಿ ಸೂಚಿಸಿದೆ ಎಂದು ಪೋಷಕರು ದೂರಿದರು.
ಓದಿ: ಕೊರೊನಾ ಮರಣ ಮೃದಂಗ.. ರಾಜ್ಯದಲ್ಲಿಂದು ಸೋಂಕಿಗೆ 70 ಮಂದಿ ಸಾವು!
ಶಾಲಾ ಆವರಣದಲ್ಲಿ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಾಣಾಧಿಕಾರಿ ಶಾಲೆಯ ಬಳಿ ಬಂದರೂ ಪೋಷಕರ ಅಹವಾಲು ಆಲಿಸದೇ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ವಿಚಾರ ತಿಳಿದ ಸೋಲದೇವನಹಳ್ಳಿ ಪೊಲೀಸರು ಮಧ್ಯಪ್ರವೇಶಿಸಿ ಆಡಳಿತ ಮಂಡಳಿಯವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಆದರೂ ಇದಕ್ಕೆ ಒಪ್ಪದ ಪೋಷಕರು ಪ್ರತಿಭಟನೆ ತೀವ್ರಗೊಳಿಸಿದಾಗ ಶಾಲಾ ಆಡಳಿತ ಮಂಡಳಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದೆ. ಬಳಿಕ ಪ್ರತಿಭಟನೆ ಕೈಬಿಟ್ಟು ಪೋಷಕರು ಶಾಲೆಯಿಂದ ಹೊರನಡೆದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ