ಬೆಂಗಳೂರು: ಪಾದರಾಯನಪುರದ 30 ವರ್ಷದ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಕಂಟೇನ್ಮೆಂಟ್ ವಲಯವಾಗಿರುವ ಪಾದರಾಯನಪುರದ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ನಗರದ 12ನೇ ಕ್ರಾಸ್ನಲ್ಲಿ ವಾಸವಿದ್ದ ಮಹಿಳೆಯನ್ನು ಪರೀಕ್ಷಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಇದೇ ವೇಳೆ ಪಾದರಾಯನಪುರದಲ್ಲಿ ಪರೀಕ್ಷೆಗೆ ಒಳಗಾದವರ ವರದಿ ಬರಲು ತುಂಬಾ ತಡವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಬಹುತೇಕ ಮಂದಿಯನ್ನು ಪರೀಕ್ಷಿಸಿದ್ದು, ಗಂಟಲು ದ್ರವದ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆದರೆ ವರದಿ ಬರುವುದರಲ್ಲಿ ವಿಳಂಬವಾಗುತ್ತಿದೆ.
ಮೊದಲ ಹಂತದಲ್ಲಿ ವೃದ್ಧರು, ಮಕ್ಕಳು, ಬಾಣಂತಿಯರ ಪರೀಕ್ಷೆ ಮಾಡಲಾಗಿದ್ದು, ಬರೋಬ್ಬರಿ 290 ಜನರ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಮೇ 22, 23ರಂದು ಮಾಡಿದ್ದ ಪರೀಕ್ಷೆ ವರದಿಗಳೇ ಇನ್ನೂ ತಲುಪಿಲ್ಲ. ಸಾಮಾನ್ಯವಾಗಿ 24 ಗಂಟೆಯಲ್ಲಿ ಫಲಿತಾಂಶ ಗೊತ್ತಾಗುತ್ತಿತ್ತು. ಇದೀಗ ಎರಡು ಮೂರು ದಿನವಾದ್ರೂ ವರದಿ ಕೈ ಸೇರದೆ ಇರುವುದು ಪಾಲಿಕೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.