ಬೆಂಗಳೂರು: ಬೆಳಗಾವಿ ಅಧಿವೇಶನ ನಡೆಸುವ ಬಗ್ಗೆ ಅನುಮಾನ, ಆತಂಕ ಈಗಲೂ ಮುಂದುವರಿದಿದೆ. ಅಧಿಕಾರಿಗಳು, ಶಾಸಕರ ಒಂದು ವರ್ಗ Omicron ಭೀತಿ ಮಧ್ಯೆ ಬೆಳಗಾವಿ ಅಧಿವೇಶನಕ್ಕೆ ಬಲವಾದ ವಿರೋಧ ವ್ಯಕ್ತಪಡಿಸುತ್ತಿದೆ. ಆದರೂ ಸರ್ಕಾರ ಸದ್ಯ ಕೆಲ ಸುರಕ್ಷತಾ ಮಾರ್ಗಸೂಚಿಯೊಂದಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ನಿಲುವು ತಳೆದಿದೆ.
ಕರ್ನಾಟಕದಲ್ಲಿ ಒಮಿಕ್ರೋನ್ ರೂಪಾತರಿ ಪತ್ತೆಯಾದ ಬಳಿಕ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಶಾಸಕರು ಹಾಗೂ ಅಧಿಕಾರಿ ವರ್ಗದಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಒಮಿಕ್ರೋನ್ನ ಈ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನ ಅಪಾಯಕಾರಿ ಎಂಬ ಭೀತಿ ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಆದರೂ ಕಳೆದ ಎರಡು ವರ್ಷದಿಂದ ಬೆಳಗಾವಿ ಅಧಿವೇಶನ ನಡೆಯದೇ ಇರುವುದರಿಂದ ಮತ್ತೆ ಈ ಬಾರಿ ಬೆಳಗಾವಿ ಅಧಿವೇಶನ ರದ್ದು ಮಾಡಿದರೆ, ಉತ್ತರ ಕರ್ನಾಟಕ ಜನರಿಗೆ ತಪ್ಪು ಸಂದೇಶ ನೀಡಿದಂತೆ ಆಗುತ್ತದೆ ಎಂಬ ಅನಿವಾರ್ಯತೆಗೆ ಕಟ್ಟು ಬಿದ್ದು ಸರ್ಕಾರ ಸದ್ಯ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ನಿಲುವನ್ನು ತಳೆದಿದೆ. ಮುಂಜಾಗ್ರತಾ ಕ್ರಮದೊಂದಿಗೆ ಬೆಳಗಾವಿ ಅಧಿವೇಶನ ನಡೆಸಲು ಸರ್ಕಾರ ಮುಂದಾಗಿದೆ.
ಬೆಳಗಾವಿ ಅಧಿವೇಶನಕ್ಕೆ ಮುಂಜುಗ್ರತಾ ಕ್ರಮ ಏನು?:
ಸದ್ಯ ಸರ್ಕಾರ ಬೆಳಗಾವಿ ಅಧಿವೇಶನ ನಡೆಸುವ ತನ್ನ ನಿರ್ಧಾರಕ್ಕೆ ಬದ್ಧವಾಗಿದೆ. ಆದರೂ ಒಂದು ವೇಳೆ ಪ್ರಕರಣ ಹೆಚ್ಚಾದರೆ ಅಧಿವೇಶನ ನಡೆಸುವ ಬಗ್ಗೆ ಮರುಪರಿಶೀಲನೆ ನಡೆಸುವ ಚಿಂತನೆಯಲ್ಲಿದೆ.
ಸದ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಬೆಳಗಾವಿ ಅಧಿವೇಶನ ನಡೆಸುವ ನಿಲುವು ಹೊಂದಿದೆ. ಅದರಂತೆ ಬೆಳಗಾವಿಗೆ ಎರಡು ಡೋಸ್ ಲಸಿಕೆ ಪಡೆದ ಸಿಬ್ಬಂದಿಯನ್ನು ಕರೆದೊಯ್ಯಲು ಚಿಂತಿಸಲಾಗಿದೆ. ಇನ್ನು 50 ವರ್ಷ ಮೇಲ್ಪಟ್ಟ ಸಿಬ್ಬಂದಿ, ಅಸ್ತಮಾ, ದಿವ್ಯಾಂಗರು, ಇತರ ಖಾಯಿಲೆ ಹೊಂದಿರುವ ಸಿಬ್ಬಂದಿಗೆ ಬೆಳಗಾವಿ ಅಧಿವೇಶನದಿಂದ ವಿನಾಯಿತಿ ನೀಡಲು ಯೋಜಿಸಲಾಗಿದೆ.
ಕಡಿಮೆ ಸಿಬ್ಬಂದಿಯೊಂದಿಗೆ ಅಧಿವೇಶನ ನಡೆಸುವ ಚಿಂತನೆ ಇದೆ. ಕಲಾಪ ವೀಕ್ಷಣೆಗಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಬರುತ್ತಿದ್ದರು. ಆದರೆ, ಈ ಬಾರಿ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ. ಸಾರ್ವಜನಿಕರಿಗೆ ಕಲಾಪ ವೀಕ್ಷಿಸಲು ಅನುವು ಮಾಡಿಕೊಡದಿರಲು ನಿರ್ಧರಿಸಲಾಗಿದೆ. ಸಾಮಾಜಿಕ ಅಂತರದೊಂದಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.
ಸಚಿವರಲ್ಲೂ ಬೆಳಗಾವಿ ಅಧಿವೇಶನಕ್ಕೆ ಹಿಂದೇಟು:
ಇತ್ತ ಕೆಲ ಹಿರಿಯ ಸಚಿವರೂ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಮಿಕ್ರೋನ್ ವೇಳೆ ಅಧಿವೇಶನ ನಡೆಸುವುದು ಅಸಮಂಜಸ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಾನೂನು ಸಚಿವ ಮಾಧುಸ್ವಾಮಿಗೆ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲೇ ನಡೆಸುವ ಅಭಿಪ್ರಾಯ ಹೊಂದಿದ್ದಾರೆ. ಸ್ವತಃ ಸಿಎಂ ಕೂಡ ಬೆಳಗಾವಿ ಅಧಿವೇಶನ ಬಗ್ಗೆ ಹೆಚ್ಚಿನ ಒಲವು ಹೊಂದಿಲ್ಲ ಎನ್ನಲಾಗಿದೆ. ಆದರೆ ಉತ್ತರ ಕರ್ನಾಟಕದ ಜನರ ಭಾವನೆಗೆ ಕಟ್ಟು ಬಿದ್ದು, ಅಧಿವೇಶನವನ್ನು ಅಲ್ಲೇ ನಡೆಸಲು ಸಿಎಂ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲ ಸಚಿವರು ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಅಪಸ್ವರ ಎತ್ತಿದ್ದಾರೆ. ಬೆಳಗಾವಿ ಅಧಿವೇಶನ ವೇಳೆ ಸೋಂಕು ಪತ್ತೆಯಾದರೆ, ನಿಯಂತ್ರಣ ಕಷ್ಟಸಾಧ್ಯವಾಗಲಿದೆ. ಹೀಗಾಗಿ ಈ ಬಾರಿ ಅಧಿವೇಶನವನ್ನು ಬೆಂಗಳೂರಲ್ಲೇ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
(ಇದನ್ನೂ ಓದಿ: ಕೋಚ್ ರಾಹುಲ್ ಹೇಳಿದ ಮಾತು ಉಳಿಸಿಕೊಂಡ ಮಯಾಂಕ್.. ಇದಕ್ಕೆ ಕಾರಣವಾಗಿದ್ದು ಸುನಿಲ್ ಗವಾಸ್ಕರ್!)