ಬೆಂಗಳೂರು: ಹೊಸ ಪ್ರಬೇಧದ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಯಾವ ರೀತಿ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಚಟುವಟಿಕೆಗಳ ಮೇಲೆ ನಿರ್ಬಂಧದ ಬಗ್ಗೆ ಇಂದು ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿವಿಧ ದೇಶಗಳಲ್ಲಿ ಹೊಸ ಪ್ರಬೇಧದ ವೈರಸ್ ಒಮಿಕ್ರೋನ್ ಪತ್ತೆಯಾಗಿದೆ. ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಯಾವೆಲ್ಲಾ ರೀತಿಯ ನಿರ್ಬಂಧ ಹೇರಬೇಕು. ಅಲ್ಲದೇ ಅಂತಾರಾಜ್ಯ ಪ್ರಯಾಣಿಕರು, ಗಡಿಪ್ರದೇಶಗಳಲ್ಲಿನ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.
ಕೇರಳ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ
ಕೇರಳ ಗಡಿಭಾಗದಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸಲು ಸಿಎಂ ಬೊಮ್ಮಾಯಿ ಈಗಾಗಲೇ ಸೂಚಿಸಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲ ವಿಚಾರಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ಮಾಡುತ್ತೇವೆ. ವಿದೇಶದಿಂದ ಬರುವವರಿಗೆ ಕ್ವಾರಂಟೈನ್ ಹೇಗಿರಬೇಕು? ಹೊಸ ಪ್ರಬೇಧದ ವೈರಸ್ ಇರುವ ದೇಶಗಳಿಂದ ಬಂದವರಿಗೆ ನೆಗೆಟಿವ್ ಬಂದರೆ ಮುಂದಿನ ಕ್ರಮವೇನು?, ನಮ್ಮ ದೇಶದವರೇ ವಿದೇಶದಿಂದ ಬಂದವರಿಗೆ ಯಾವ ರೀತಿ ಕ್ವಾರಂಟೈನ್ ಮಾಡಬೇಕು, ಕೊರೋನಾ ಪಾಸಿಟಿವ್ ಬಂದರೆ ಏನು ಮಾಡಬೇಕು ಎಂದು ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಹೊಸ ಪ್ರಬೇಧ ಬಹಳ ತೀವ್ರಕರವಾಗಿ ಪಸರಿಸಿದರೆ ಆಗ ನಾವು ಚಟುವಟಿಕೆಗಳ ಮೇಲೆ ನಿರ್ಬಂಧ ಕ್ರಮದ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಇಲ್ಲಿಯವರೆಗೂ ಅಂತಹ ಸನ್ನಿವೇಶ ಎದುರಾಗಿಲ್ಲ. ಹೊಸ ತಳಿಯ ಗಂಭೀರತೆಯ ವರದಿ ಇನ್ನೂ ಕೈಸೇರಿಲ್ಲ. ಬಂದ ಬಳಿಕ ಚಟುವಟಿಕೆಗಳ ನಿರ್ಬಂಧ ಕುರಿತು ನಿರ್ಧರಿಸುತ್ತೇವೆ ಎಂದರು.
ಆಫ್ರಿಕಾದಿಂದ ಬಂದವರಿಗೆ ಸೋಂಕಿನ ಲಕ್ಷಣಗಳಿಲ್ಲ
ಇಲ್ಲಿಯವರೆಗೂ ಆಫ್ರಿಕಾದಿಂದ ಬಂದ ಇಬ್ಬರಿಗೆ ಪಾಸಿಟಿವ್ ಬಂದಿದೆ. ಅದನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಅಧಿಕೃತವಾಗಿ ವರದಿ ಬಂದಿಲ್ಲ. ಅವರಿಗೆ ಯಾವುದೇ ರೋಗದ ಲಕ್ಷಣಗಳಿಲ್ಲ. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವೂ ಇರಲಿಲ್ಲ. ಆದರೂ ನಾವು ಮುನ್ನೆಚ್ಚರಿಕೆ ಕ್ರಮವಾಗಿ ದಾಖಲಿಸಿದ್ದೇವೆ. ಡೆಲ್ಟಾಗಿಂತ ವಿಭಿನ್ನ ಮಾದರಿ ವೈರಸ್ ಕಂಡುಬಂದಿದೆ ಎನ್ನುವ ಕುರಿತು ಕೂಡ ವರದಿ ಬಂದಿಲ್ಲ.ಎರಡು ಮೂರು ದಿನದಲ್ಲಿ ಆ ವರದಿಯೂ ಬರಲಿದೆ ಎಂದು ಸಚಿವರು ತಿಳಿಸಿದರು.
ಕೇಂದ್ರ ನಿರ್ದೇಶಿಸಿದರೆ ಬೂಸ್ಟರ್ ಡೋಸ್
ಫ್ರಂಟ್ ಲೈನ್ ವರ್ಕರ್ಸ್ಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೇಂದ್ರದಿಂದ ಯಾವುದೇ ಮಾಹಿತಿ ಬಂದಿಲ್ಲ. ಕೇಂದ್ರ ಆರೋಗ್ಯ ಇಲಾಖೆ, ಐಸಿಎಂಆರ್ ಇಡೀ ದೇಶಕ್ಕೆ ಒಂದೇ ರೀತಿಯ ನಿರ್ದೇಶನ ಕೊಡಬೇಕಿದೆ. ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಮಾಡಲು ಸಾಧ್ಯವಿಲ್ಲ. ಕೇಂದ್ರ ಮಾರ್ಗಸೂಚಿ ಬಿಡುಗಡೆ ಮಾಡಿ ಅನುಮತಿ ನೀಡಿದಲ್ಲಿ ಬೂಸ್ಟರ್ ಡೋಸ್ ಕೊಡಲಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮಾಡುವ ಯಾವುದೇ ಪ್ರಸ್ತಾವ ಇಲ್ಲ. ಕೊರೊನಾ ಗಂಭೀರ ಪರಿಸ್ಥಿತಿ ಸದ್ಯಕ್ಕೆ ಇಲ್ಲವಾದ ಕಾರಣ ಲಾಕ್ಡೌನ್ ಹೇರುವ ಅಗತ್ಯವಿಲ್ಲ. ಪರಿಸ್ಥಿತಿ ನೋಡಿಕೊಂಡು ಸರ್ಕಾರ ಈ ಬಗ್ಗೆ ತೀರ್ಮಾನ ಮಾಡಲಿದೆ ಎಂದು ಸಚಿವ ಸುಧಾಕರ್ ವಿವರಿಸಿದರು.