ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ 40,071 ಮಂದಿ ಕೋವಿಡ್ನಿಂದ ಅಸುನೀಗಿದ್ದರೆ, 61,970 ಮಂದಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಸುಮಾರು 10,421 ಫಲಾನುಭವಿಗಳಲ್ಲಿ ಕೆಲವರು ಪರಿಹಾರ ಕೋರಲು ಒಲವು ತೋರಿಲ್ಲ, ಇನ್ನು ಕೆಲವರಲ್ಲಿ ಅರ್ಹ ವಾರಸುದಾರರಿಲ್ಲ. ಕೋವಿಡ್ನಿಂದ ದುಡಿಯುವ ವ್ಯಕ್ತಿಯನ್ನು ಕಳದುಕೊಂಡು ಅತಂತ್ರರಾದ ಬಿಪಿಎಲ್ ಕುಟುಂಬಕ್ಕೆ ರಾಜ್ಯ ಸರ್ಕಾರ 1 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಕಳೆದ ವರ್ಷ ಜುಲೈ 8ಕ್ಕೆ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿತ್ತು.
ಬಳಿಕ ಕೇಂದ್ರ ಸರ್ಕಾರ ಎಪಿಎಲ್ ಹಾಗೂ ಬಿಪಿಎಲ್ ಕುಟುಂಬ ಎರಡಕ್ಕೂ 50,000 ರೂ. ಪರಿಹಾರವನ್ನು ಕಳೆದ ವರ್ಷ ಸೆಪ್ಟೆಂಬರ್ 22ಕ್ಕೆ ಘೋಷಣೆ ಮಾಡಿತ್ತು. ಪರಿಹಾರ ಘೋಷಣೆ ಮಾಡಿದ ಆರು ತಿಂಗಳ ಬಳಿಕ ರಾಜ್ಯ ಸರ್ಕಾರ ಪರಿಹಾರ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡುವ ಕಾರ್ಯ ಆರಂಭಿಸಿದೆ. ಕಳೆದ ಡಿಸೆಂಬರ್ 27ರಂದು ಪರಿಹಾರ ವಿತರಿಸುವ ಕಾರ್ಯಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದರು. ಬಿಪಿಎಲ್ ಫಲಾನುಭವಿಗೆ ಕೇಂದ್ರದ ಹಾಗೂ ರಾಜ್ಯದ ಪರಿಹಾರ ಎರಡೂ ಸೇರಿ 1.50 ಲಕ್ಷ ಪರಿಹಾರ ಪಾವತಿಸಲಾಗುತ್ತಿದೆ.
ಅಧಿಕೃತ ಕೋವಿಡ್ ಮೃತರಿಗಿಂತ ಅಧಿಕ ಮಂದಿ ಅರ್ಜಿ : ಪರಿಹಾರ ವಿತರಣೆಯ ಹೊಣೆ ಹೊತ್ತಿರುವ ಪಿಂಚಣಿ ಇಲಾಖೆ ನೀಡಿದ ಅಂಕಿ - ಅಂಶದ ಪ್ರಕಾರ ಈವರೆಗೆ ಒಟ್ಟು 61,970 ಮಂದಿಯಿಂದ ಪರಿಹಾರ ಕೋರಿ ಅರ್ಜಿ ಸ್ವೀಕರಿಸಲಾಗಿದೆ. ಆರೋಗ್ಯ ಇಲಾಖೆಯ ಅಧಿಕೃತ ಅಂಕಿ - ಅಂಶದಲ್ಲಿ ಈವರೆಗೆ 40,071 ಮಂದಿ ಕೋವಿಡ್ಗೆ ಮೃತರಾಗಿದ್ದಾರೆ. ಈ ಪೈಕಿ ಆರೋಗ್ಯ ಇಲಾಖೆ ವರದಿಯಂತೆ ಬಿಪಿಎಲ್ ಕುಟುಂಬಸ್ಥರು 14,496 ಮಂದಿ ಹಾಗೂ ಎಪಿಎಲ್ ಕುಟುಂಬಸ್ಥರು 15,154 ಮಂದಿ ಸೇರಿದಂತೆ ಒಟ್ಟು 29,650 ಫಲಾನುಭವಿಗಳು ಪರಿಹಾರ ಕೋರಿ ಅರ್ಜಿ ಹಾಕಿದ್ದಾರೆ. ಈ ಪೈಕಿ ಈವರೆಗೆ ಒಟ್ಟು 27,433 ಫಲಾನುಭವಿಗಳ ಖಾತೆಗೆ ಪರಿಹಾರ ಧನವನ್ನು ಜಮೆ ಮಾಡಲಾಗಿದೆ. ಸುಮಾರು 1,571 ಫಲಾನುಭವಿಗಳ ಖಾತೆಗೆ ತಾಂತ್ರಿಕ ಕಾರಣದಿಂದ ಜಮೆಯಾಗುವುದು ವಿಫಲವಾಗಿದೆ.
ಒಟ್ಟು ಅರ್ಜಿ ಸಲ್ಲಿಸಿದ 61,970ರ ಪೈಕಿ 32,320 ಅರ್ಜಿ ಹಾಕಿದವರ ಕುಟುಂಬ ಸದಸ್ಯ ಕೋವಿಡ್ಗೆ ಮೃತರಾಗಿರುವ ಬಗ್ಗೆ ಅಧಿಕೃತವಾಗಿ ನೋಂದಾವಣೆ ಆಗಿರಲಿಲ್ಲ. ಆದರೆ, ಆಯಾ ಜಿಲ್ಲೆಗಳಲ್ಲಿ ರಚಿಸಲಾಗಿರುವ ಜಿಲ್ಲಾ ವಿಶೇಷ ಸಮಿತಿಗಳು ಪರಿಶೀಲಿಸಿ, ಅವರನ್ನು ಕೋವಿಡ್ ಮೃತರೆಂದು ಘೋಷಿಸಿದೆ. ಆ ಮೂಲಕ ಸರ್ಕಾರ ಅಧಿಕೃತ ಕೋವಿಡ್ ಮೃತ ಅಂಕಿಗೆ ಇನ್ನಷ್ಟು ಹೆಚ್ಚಿನ ಮೃತರನ್ನು ಸೇರಿಸಲು ಸಾಧ್ಯವಾಗಿದೆ.
ಜಿಲ್ಲಾ ವಿಶೇಷ ಸಮಿತಿಯ ವರದಿಯಂತೆ ಈವರೆಗೆ 17,065 ಬಿಪಿಎಲ್ ಕುಟುಂಬಸ್ಥರು ಅರ್ಜಿ ಸಲ್ಲಿಸಿದ್ದರೆ, 15,255 ಎಪಿಎಲ್ ಕುಟುಂಬಸ್ಥರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 25,745 ಫಲಾನುಭವಿಗಳಿಗೆ ಪರಿಹಾರ ಪಾವತಿಸಲಾಗಿದೆ. 3,962 ಫಲಾನುಭವಿಗಳ ಖಾತೆಗೆ ಪರಿಹಾರ ಜಮೆಯಾಗುವುದು ವಿಫಲವಾಗಿದೆ. ಈವರೆಗೆ ಒಟ್ಟಾರೆ 53,178 ಫಲಾನುಭವಿಗಳಿಗೆ ಒಟ್ಟು 412 ಕೋಟಿ ರೂ. ರಾಜ್ಯದ ಹಾಗೂ ಕೇಂದ್ರದ ಪರಿಹಾರ ಪಾವತಿಸಲಾಗಿದೆ ಎಂದು ಪಿಂಚಣಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಕೋವಿಡ್ ಪರಿಹಾರ ನಿರಾಕರಣೆ : ಇತ್ತ ಅನೇಕರು ಪರಿಹಾರ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ. ಹೀಗಾಗಿ ಸುಮಾರು 10,421 ಕೋವಿಡ್ ಮೃತರ ಕುಟುಂಬಸ್ಥರ ಪೈಕಿ ಹಲವರು ಅರ್ಜಿ ಹಾಕಲು ಒಲವು ಹೊಂದಿಲ್ಲ, ಇನ್ನು ಕೆಲವರಿಗೆ ಅರ್ಹ ವಾರಸುದಾರರಿಲ್ಲದೇ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ಅರ್ಜಿ ಸಲ್ಲಿಸಿದವರ ಪೈಕಿ 395 ಮಂದಿ ಪರಿಹಾರ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ. ಇನ್ನು ಸುಮಾರು 356 ಮಂದಿ ಬೇರೆ ರಾಜ್ಯದವರಾಗಿದ್ದು, ಪರಿಹಾರ ನಿರಾಕರಿಸಿದ್ದಾರೆ.
ಅರ್ಜಿ ಹಾಕಿದವರಲ್ಲಿ 1,093 ಫಲಾನುಭವಿಗಳು ಪತ್ತೆಯಾಗುತ್ತಿಲ್ಲ. 121 ಮಂದಿಗೆ ಅರ್ಹ ವಾರಸುದಾರರಿಲ್ಲ. ಆ ಮೂಲಕ ಒಟ್ಟು 1,965 ಮಂದಿಗೆ ಪರಿಹಾರ ನೀಡುವುದನ್ನು ನಿರಾಕರಿಸಲಾಗಿದೆ ಎಂದು ಇಲಾಖೆ ಅಂಕಿ - ಅಂಶ ನೀಡಿದೆ.
ಇದನ್ನೂ ಓದಿ : ರಾಜ್ಯದಲ್ಲಿಂದು 530 ಮಂದಿಗೆ ಕೋವಿಡ್ ದೃಢ, ಸಾವು ಶೂನ್ಯ