ಬೆಂಗಳೂರು: ರಾತ್ರಿಯಾದರೂ ಬೀದಿ ಬೀದಿ ಸುತ್ತಿ ಹೆಣ್ಣು ಮಕ್ಕಳು ಕೆಲಸ ಮಾಡಬೇಕು. ಆದರೆ ಎಸಿ ರೂಮ್ನಲ್ಲಿ ಕೂತು ಮಾಹಿತಿ ಪಡೆದು ಬಿಲ್ಡಪ್ ಕೊಡುವುದು ಮಾತ್ರ ಅಧಿಕಾರಿಗಳು. ಪಿಪಿಇ ಕಿಟ್ಗಳಿಗೆ ಕೋಟಿ ಕೋಟಿ ಖರ್ಚು ಮಾಡುತ್ತಾರೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ನರ್ಸ್ಗಳಿಗೆ ಮಾತ್ರ ಆ ಸೌಲಭ್ಯ ಇಲ್ಲ.
ಈ ರೀತಿ ಅಳಲು ತೋಡಿಕೊಂಡಿದ್ದು ಮಂಗಮ್ಮನಪಾಳ್ಯ ವಾರ್ಡ್ನ ಮದೀನಾ ನಗರದ ನರ್ಸ್. ಆಕೆ ಮೇಲಾಧಿಕಾರಿಗಳ ಜೊತೆ ಫೋನ್ನಲ್ಲಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದೀನಾ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸ್ಗಳಿಗೆ ಭದ್ರತೆ ಇಲ್ಲ. ರಾತ್ರಿ 9 ಗಂಟೆಯಾದರೂ ಒಬ್ಬರೇ ಹೋಗಿ ಕೊರೊನಾ ಸೋಂಕಿತರ ಕುಟುಂಬ ಸದಸ್ಯರ ಪ್ರಾಥಮಿಕ ಸಂಪರ್ಕದ ವರದಿ ಸಂಗ್ರಹಿಸಬೇಕು ಎಂದು ಕಣ್ಣೀರು ಹಾಕಿದ್ದಾರೆ.
ಇಂತಹ ಪರಿಸ್ಥಿತಿ ಯಾರಿಗೂ ಬೇಡ. ನಮಗೆ ಕಿಟ್ ಇಲ್ಲ. ಮಾಸ್ಕ್ ನೀಡಿ ನಾಲ್ಕು ದಿನವಾಗಿದೆ. ಅಧಿಕಾರಿಗಳು, ವೈದ್ಯರು ಎಲ್ಲರೂ ಬರಬೇಕು. ಆದರೆ ಯಾರೂ ಬರುವುದಿಲ್ಲ. ನಾನೊಬ್ಬಳೇ ಸೋಂಕಿತರ ಮನೆಗೆ ಹೋಗಿ ವರದಿ ಕೊಡಬೇಕು. ರಾತ್ರಿ ವಾಪಸ್ ಹೋಗಲು ವಾಹನದ ವ್ಯವಸ್ಥೆಯೂ ಇಲ್ಲ ಎಂದು ಗಳಗಳನೆ ಅತ್ತಿದ್ದಾರೆ.