ಬೆಂಗಳೂರು : ನಾಳಿನ ಬಂದ್ಗೆ ಸರ್ಕಾರದ ಯಾವುದೇ ಬೆಂಬಲ ಇಲ್ಲ. ಬಂದ್ ಮಾಡುವುದಕ್ಕೂ ಅವಕಾಶ ಇಲ್ಲ. ಯಥಾವತ್ತಾಗಿ ಸರ್ಕಾರಿ ಕಚೇರಿಗಳು, ಟ್ಯಾಕ್ಸಿ, ಬಸ್ಗಳು ಇರಲಿವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಂಗಡಿ-ಮುಗ್ಗಟ್ಟುಗಳು ಎಂದಿನಂತೆ ಓಪನ್ ಇರಲಿವೆ. ಸಾರ್ವಜನಿಕರು ಯಾವುದೇ ಭಯ ಭೀತಿಗೊಳಗಾಗಬಾರದು. ಸಾರ್ವಜನಿಕರು ಸುಗಮವಾಗಿ ಜೀವನ ನಡೆಸಬಹುದಾಗಿದೆ. ಯಾರಾದ್ರೂ ಕಿಡಿಗೇಡಿಗಳು ಬಲಾತ್ಕಾರ, ಕಲ್ಲು ತೂರಾಟ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರದಿಂದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಬಂದ್ ಮಾಡದಂತೆ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶವಿದೆ. ಹೀಗಾಗಿ, ನಾವು ಬೆಂಬಲ ನೀಡುವುದಿಲ್ಲ. ಕಲ್ಲು ತೂರುವಂಥ ಪ್ರಯತ್ನ ಮಾಡಿದ್ರೆ ಕಠಿಣ ಕ್ರಮಕೈಗೊಳ್ಳುತ್ತೇವೆ. ನಮ್ಮ ಪೊಲೀಸರು ಇದರ ಬಗ್ಗೆ ನಿಗಾವಹಿಸಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಅವಧಿಯಲ್ಲೇ ಭೂ ಸುಧಾರಣೆ ತಿದ್ದುಪಡಿ ತಂದಿದ್ದರು. ಅದನ್ನು ಕ್ಯಾಬಿನೆಟ್ ಸಬ್ ಕಮಿಟಿ ಮುಂದೆ ತಂದಿದ್ದರು. ಅದನ್ನೇ ನಾವು ಕಾಯ್ದೆಯನ್ನಾಗಿ ತಂದಿದ್ದೇವೆ. ದೇಶ ಹೊಸ ಅಭಿವೃದ್ಧಿಯತ್ತ ಸಾಗಬೇಕು. ಕೆಪಿಸಿಸಿ ಅಧ್ಯಕ್ಷ ಡಿಕೆಶಿಯೇ ಇದರ ಪರ ವಾದಿಸಿದ್ದರು. ತಿದ್ದುಪಡಿ ತರುವಂತೆ ಹಿಂದೆ ಒತ್ತಾಯಿಸಿದ್ದರು. ಅದಕ್ಕೆ ಈಗ ನಾವು 79ಎ, ಬಿಗೆ ತಿದ್ದುಪಡಿ ತಂದಿದ್ದೇವೆ ಎಂದು ಸಮರ್ಥಿಸಿಕೊಂಡರು.