ಬೆಂಗಳೂರು: ರಾಜಧಾನಿಯಲ್ಲೇ ಉಳಿದುಕೊಂಡಿದ್ದ ಜೆಎಂಬಿ (ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ) ಉಗ್ರ ಮೊಸ್ರಾಫ್ ಹುಸೇನ್ ಎಂಬಾತನನ್ನು ಪಶ್ಚಿಮ ಬಂಗಾಳದ ಮೊರ್ಷಿದಬಾದ್ನಲ್ಲಿ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಬಂಧಿಸಿದೆ.
2018ರ ಮಾರ್ಚ್-ಏಪ್ರಿಲ್ನಲ್ಲಿ ಮೊಸ್ರಾಫ್ ಹುಸೇನ್, ಜೆಎಂಬಿಯ ಇತರ ಉಗ್ರರ ಜೊತೆ ಸೇರಿ ನಗರ ಹೊರವಲಯದಲ್ಲಿ ಡಕಾಯಿತಿ ಮಾಡಿದ್ದ ಹಾಗೂ ವಿಧ್ವಂಸಕ ಕೃತ್ಯಗಳಿಗೆ ಹಣ ಸಂಗ್ರಹಿಸಲು ಡಕಾಯಿತಿಯಲ್ಲಿ ಭಾಗಿಯಾಗಿದ್ದ ಮಾಹಿತಿ ಆಧರಿಸಿ ನಗರದ ಚಿಕ್ಕಬಾಣವಾರದಲ್ಲಿನ ಮನೆಯೊಂದರ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯಲ್ಲಿ ಗ್ರೆನೇಡ್, ಏರ್ ಗನ್, ಜೀವಂತ ಗುಂಡು ಸೇರಿ ಹಲವು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು.
ಇದೀಗ ಪಶ್ಚಿಮ ಬಂಗಾಳದ ಮೊರ್ಷಿದಬಾದ್ನಲ್ಲಿ ಮೊಸ್ರಾಫ್ ಹುಸೇನ್ನನ್ನು ಎಎನ್ಐ ಅಧಿಕಾರಿಗಳು ಬಂಧಿಸಿದ್ದು, ಮಂಗಳವಾರ ಕೊಲ್ಕತ್ತಾ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕೋರ್ಟ್ನಿಂದ ಅನುಮತಿ ಪಡೆದು, ಬೆಂಗಳೂರಿಗೆ ಕರೆತರಲಿದ್ದಾರೆ.
ಈ ಹಿಂದೆ ಆಸೀಫ್, ಇಕ್ಬಾಲ್, ಅಬೀಬುರ್ ರೆಮಾನ್, ನಜೀರ್ ಶೇಖ್ ಜೊತೆ ಸೇರಿ ಮುಸ್ರಾಫ್ ಜೆಎಂಬಿ ಸಂಘಟನೆಗೆ ಹಣ ಸಂಗ್ರಹಣೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ಎನ್ಐಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.