ಬೆಂಗಳೂರು: ಕನ್ನಡದ ನಾತಿಚರಾಮಿ ಚಲನಚಿತ್ರಕ್ಕೆ 66 ನೇ ರಾಷ್ಟ್ರೀಯ ಚಲನಚಿತ್ರ 2018 ರ ಪ್ರಶಸ್ತಿ ನೀಡಿರುವುದಕ್ಕೆ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದ ಬಿ.ಎಸ್ ಲಿಂಗದೇವರು ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಿ ಎಂದು ಹೈಕೋರ್ಟ್ ಚಲನಚಿತ್ರೋತ್ಸವ ನಿರ್ದೇಶನಾಲಯಕ್ಕೆ ಸೂಚನೆ ನೀಡಿದೆ.
ನಾತಿಚರಾಮಿ ಪ್ರಶಸ್ತಿ ವಿವಾದ ಕುರಿತಂತೆ ಸಿನಿಮಾ ನಿರ್ದೇಶಕ ದಯಾಳ್ ಪದ್ಮನಾಭನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಹೆಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು.
ಅರ್ಜಿದಾರ ಪರ ವಕಾಲತ್ತು ವಹಿಸಿದ ವಕೀಲರು, ಬಿ.ಎಸ್. ಲಿಂಗದೇವರು ಅಕ್ಕ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾಗಿದ್ದರು. ಪ್ರಶಸ್ತಿ ಪಡೆದ ನಾತಿಚರಾಮಿ ಚಿತ್ರದ ಸಂಕಲನಕ್ಕೆ ಅಕ್ಕ ಕಂಪನಿ ಸಹಾಯ ಮಾಡಿದೆ. ಇದರಿಂದಾಗಿ ಲಿಂಗದೇವರು ನಾತಿಚರಾಮಿ ಚಿತ್ರದ ನಿರ್ಮಾಣದಲ್ಲಿ ನೇರ ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ. ಆದ್ರೆ ಈ ವಿಚಾರವನ್ನು ಆಯ್ಕೆ ಸಮಿತಿಗೆ ತಿಳಿಸಿಲ್ಲವೆಂದು ಕೋರ್ಟ್ಗೆ ತಿಳಿಸಿದರು.
ಈ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ನವದೆಹಲಿಯ ಚಲನಚಿತ್ರೋತ್ಸವ ನಿರ್ದೇಶನಾಲಯ ಈಗಾಗಲೇ ವಿಚಾರಣೆ ಆರಂಭಿಸಿ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.
ಇನ್ನು, ಈ ಕುರಿತಂತೆ ಪ್ರತಿಕ್ರಿಯಿಸಿದ ನ್ಯಾಯಾಲಯವು ಕಾನೂನು ಪ್ರಕಾರ ವಿಚಾರಣೆ ನಡೆಸಿ, ಆರೋಪಗಳು ನಿಜವಾಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಚಲನಚಿತ್ರೋತ್ಸವ ನಿರ್ದೇಶನಾಲಯಕ್ಕೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿದೆ.