ಬೆಂಗಳೂರು: ಅಕ್ಟೋಬರ್ 2ರಂದು ಶಿರಾ ಕ್ಷೇತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಲಿದ್ದು, ಉಪ ಚುನಾವಣಾ ಪೂರ್ವ ತಯಾರಿ ಸಂಬಂಧ ಎರಡು ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರಾ ಉಪ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. 200ಕ್ಕೂ ಹೆಚ್ಚಿನ ಬೂತ್ ಸಮಿತಿ ರಚನೆಯಾಗಿದೆ. ಸದ್ಯದಲ್ಲೇ ಎಲ್ಲಾ 264 ಬೂತ್ಗಳಲ್ಲೂ ಸಮಿತಿ ರಚನೆ ಪೂರ್ಣವಾಗಲಿದೆ. ವಾಟ್ಸ್ಆ್ಯಪ್ ಗ್ರೂಪ್ ರಚನೆ ಕೂಡ ಆಗಲಿದೆ. ಅಕ್ಟೋಬರ್ 2 ರಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಿರಾಕ್ಕೆ ಭೇಟಿ ನೀಡಿ ಎರಡು ಸಭೆ ನಡೆಸಲಿದ್ದಾರೆ. ಮೊದಲನೇ ಸಭೆಯಲ್ಲಿ ಪ್ರತಿ ಬೂತ್ನಿಂದ ಐವರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದರು.
ಅಂದು ಸಂಜೆ ಗಾಂಧಿ ಜಯಂತಿ ಮಾಡಲಿದ್ದೇವೆ. ಪ್ರಮುಖ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಲಿದ್ದಾರೆ. ಪ್ರತಿ ಬೂತ್ನಲ್ಲೂ ಗಾಂಧಿ ಜಯಂತಿ ಅಂಗವಾಗಿ ಐದು ಗಿಡ ನೆಡಲಾಗುತ್ತದೆ ಎಂದರು.
ಈ ಬಾರಿ ಶಿರಾದಲ್ಲಿ ಬದಲಾವಣೆ ತರುವ ವಾತಾವರಣ ನಿರ್ಮಾಣವಾಗುತ್ತಿದೆ. ಮೊದಲ ಬಾರಿಗೆ ಬಿಜೆಪಿ ಪರ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ 186 ಬೂತ್ಗಳಿಗೆ ಭೇಟಿ ನೀಡಿದ್ದೇನೆ. ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಚುನಾವಣೆ ಘೋಷಣೆ ಆದ ನಂತರ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಯಾರು ಎನ್ನುವುದನ್ನು ನೋಡಿ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಲಿದೆ. ಕೋರ್ ಕಮಿಟಿಯಲ್ಲಿ ಅಭ್ಯರ್ಥಿ ನಿರ್ಧಾರ ಆಗಲಿದೆ ಎಂದರು.
ಈ ಬಾರಿ ಗೆಲ್ಲಲೇಬೇಕು ಎಂದು ಅಭ್ಯರ್ಥಿಯ ಆಯ್ಕೆ ಮಾಡಲಾಗುತ್ತದೆ. ಯಾರಿಗೆ ಟಿಕೆಟ್ ಎಂದು ನಿರ್ಧಾರವಾಗಿಲ್ಲ. ಸಿಎಂ ಯಡಿಯೂರಪ್ಪ ಹಾಗೂ ಕಟೀಲ್ ನಿರ್ಣಯವನ್ನು ನಾವು ಪಾಲನೆ ಮಾಡಲಿದ್ದೇವೆ ಎಂದರು.
ಸೆಪ್ಟೆಂಬರ್ 25 ರಂದು ಪಂಡಿತ್ ದೀನ್ ದಯಾಳ್ ಉಪಾದ್ಯಾಯ ಜಯಂತಿ ಆಚರಿಸಲಾಗುತ್ತದೆ. ಬಿಜೆಪಿಗೆ ಸಿದ್ಧಾಂತ ಕೊಟ್ಟವರು ಹಾಗೂ ಪಕ್ಷದ ಮೊದಲ ಸಂಘಟನಾ ಕಾರ್ಯದರ್ಶಿ ಆಗಿದ್ದರು, ಅಂತ್ಯೋದಯ ಪರಿಕಲ್ಪನೆ ಬಿಜೆಪಿಗೆ ಕೊಟ್ಟವರು. ಅವರ ಕೊಡುಗೆ ಸ್ಮರಿಸಿ ನಾವು ಪ್ರತಿ ಮಂಡಲದಲ್ಲಿಯೂ ಸೆ. 25 ರಂದು ದೀನ್ ದಯಾಳ್ ಉಪಾಧ್ಯಾಯ ಜಯಂತಿ ಮಾಡುತ್ತೇವೆ ಎಂದರು.