ಬೆಂಗಳೂರು : ನನ್ನ ಫೈಟ್ ವಿರೋಧ ಪಕ್ಷದವರ ಜೊತೆ ಇರುತ್ತದೆಯೇ ಹೊರತು, ನಮ್ಮ ಪಕ್ಷದ ನಾಯಕರ ವಿರುದ್ದವಲ್ಲ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಆರ್.ಅಶೋಕ್ ಅವರ ಬಗ್ಗೆ ನಾನು ಮಾತನಾಡಿದ್ದೇನೆ. ನಮ್ಮ ಪಕ್ಷದ ನಾಯಕರ ವಿರುದ್ದ ಏಕೆ ಮಾತನಾಡಲಿ. ನನಗೆ ಮೆಂಟಲ್ ಆಸ್ಪತ್ರೆಗೆ ಸೇರುವ ಪರಿಸ್ಥಿತಿ ಬಂದಿಲ್ಲ. ಕೆಲ ಮಾಧ್ಯಮದವರು ಸುಳ್ಳು ಸುದ್ದಿ ಸೃಷ್ಟಿ ಮಾಡುತ್ತಿದ್ದಾರೆ. ನನಗೆ ಬೇಸಿಕ್ ಕಾಮನ್‌ಸೆನ್ಸ್ ಇದೆ. ನಾನು ಯೋಚನೆ ಮಾಡಿ ಮಾತನಾಡುತ್ತೇನೆ ಎಂದು ನುಡಿದರು.
ಇಂದು ಬೆಳಗ್ಗೆ ಎಂ ಬಿ ಪಾಟೀಲ್ ಅವರು ಕರೆ ಮಾಡಿ ಮಾತನಾಡಿದ್ರು. ಅವರ ಫೋನ್ ಕೂಡ ಟ್ಯಾಪಿಂಗ್ ಆಗಿದೆ ಎಂದು ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಪಿಎ ಫೋನ್ ಟ್ಯಾಪಿಂಗ್ ಆಗಿದೆ ಎಂಬ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಟೆಲಿಫೋನ್ ಕದ್ದಾಲಿಕೆ ನಡೆದಿಲ್ಲ. ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಾಗಲಿ ಅಥವಾ ಗೃಹ ಸಚಿವ ಎಂ ಬಿ ಪಾಟೀಲ್ ಅವರಾಗಲಿ ಈ ಕೆಲಸ ಮಾಡಿಲ್ಲ ಎಂದರು.