ಬೆಂಗಳೂರು : ಬೆಂಗಳೂರು ನನಗೆ ಇಷ್ಟವಾದ ನಗರ. ಇಲ್ಲಿ ಅನೇಕ ಸ್ನೇಹಿತರು ಇದ್ದಾರೆ. ಅವರನ್ನು ಭೇಟಿ ಮಾಡುತ್ತೇನೆ. ಜನಾರ್ದನ ಹೋಟೆಲ್ ದೋಸೆ ಇಷ್ಟ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಬೆಂಗಳೂರಿನ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಪ್ರೆಸ್ಕ್ಲಬ್ ಆಫ್ ಬೆಂಗಳೂರು ಇಂದು ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾನು ಸಾಕಷ್ಟು ಸಮಯ ಇಲ್ಲಿ ಎಂಜಾಯ್ ಮಾಡಿದ್ದೇನೆ. ನಾನು ಕರ್ನಾಟಕದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಕರ್ನಾಟಕದ ಜನರ ಸ್ನೇಹ ಮನೋಭಾವ ನನಗೆ ಬಹಳ ಇಷ್ಟ ಎಂದು ಹೊಗಳಿದರು.
ಮತ್ತೆ ರಾಜಕೀಯಕ್ಕೆ ಹೋಗಲ್ಲ: ಇನ್ನೂ ಮೂರು ತಿಂಗಳಲ್ಲಿ ನನ್ನ ಅಧಿಕಾರ ಅವಧಿ ಮುಗಿಯತ್ತದೆ. ಮತ್ತೆ ರಾಜಕೀಯಕ್ಕೆ ಹೋಗಲ್ಲ. ಆದರೆ, ವಿಶ್ರಾಂತಿಯೂ ಮಾಡಲ್ಲ. ನಾನು ಪ್ರತಿ ರಾಜ್ಯಕ್ಕೆ ಭೇಟಿ ನೀಡಿದ್ದೇನೆ. ಸಾಕಷ್ಟು ಸಮಯ ಭಾರತದ ಎಲ್ಲ ಭಾಗದಲ್ಲಿ ಕಳೆದಿದ್ದೇನೆ ಎಂದ ಅವರು, ಮತ್ತೆ ಬೆಂಗಳೂರಿಗೆ ಭೇಟಿ ನೀಡುತ್ತೇನೆ ಎಂದರು.
ಪಂಚಾಯತ್ ರಾಜ್ ವ್ಯವಸ್ಥೆ ಸದೃಢಗೊಳಿಸಿ : ಇಂದು ಪಂಚಾಯತ್ ರಾಜ್ ದಿವಸ, ತ್ರೀ ಟಯರ್ ಸಿಸ್ಟಮ್ ಅಳವಡಿಸಿಕೊಂಡಿದ್ದೇವೆ. ಪ್ರಜಾಪ್ರಭುತ್ವವನ್ನು ಭದ್ರಗೊಳಿಸಲು ಈ ವ್ಯವಸ್ಥೆ ಮಹತ್ವದ್ದಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆ ಸದೃಢಗೊಳಿಸಬೇಕು ಎಂದು ಉಪ ರಾಷ್ಟ್ರಪತಿ ಎಲ್ಲಾ ರಾಜ್ಯಗಳಿಗೆ ಕರೆ ನೀಡಿದರು.
ದೇಶದ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ನಿರ್ಣಾಯಕ. ಕೇಂದ್ರದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಇನ್ಪರ್ಮೇಶನ್ ಮತ್ತು ಕನ್ಪರ್ಮೇಶನ್ ಜೊತೆಗೆ ಜನರಿಗೆ ತಲುಪಿಸುವುದು ಮಾಧ್ಯಮದ ಭಾಗ. ಎಲ್ಲರೂ ಲೋಕಸಭೆಯಲ್ಲಾಗುವ ಚರ್ಚೆಯನ್ನು ನೋಡುತ್ತಿರುತ್ತಾರೆ. ಆದರೆ, ಅಲ್ಲಿ ನಡೆಯುವ ಕೆಳಹಂತದ ನಡವಳಿಕೆಯನ್ನು ನಾವು ಹೇಳಲು ಸಾಧ್ಯವಿಲ್ಲ. ಕಣ್ಣಿಗೆ ಕಾಣದ ಸತ್ಯಗಳನ್ನು ಬೆಳಕಿಗೆ ತರುವ ಕೆಲಸವನ್ನು ಮಾಧ್ಯಮ ಮಾಡಬೇಕಿದೆ.
ಯಾರೋ ಒಬ್ಬ ಜನಪ್ರತಿನಿಧಿ ಒಳ್ಳೆಯ ಭಾಷಣ ಮಾಡಿದರೆ ಮಾಧ್ಯಮಗಳು ಅದನ್ನು ಹೈಲೈಟ್ ಮಾಡುವುದಿಲ್ಲ. ಜನಪ್ರತಿನಿಧಿಗಳ ಉತ್ತಮ ಕಾರ್ಯಗಳನ್ನೂ ಕೂಡ ಮಾಧ್ಯಮಗಳು ತೋರಿಸಬೇಕು. ಮೀಡಿಯಾ ಹೆಡ್ಲೈನ್ಗಳು ಈಗ ಡೆಡ್‌ಲೈನ್‌ಗಳಾಗಿವೆ. ಮಾಧ್ಯಮಗಳಲ್ಲಿ ನ್ಯೂಸ್ ಮತ್ತು ವ್ಯೂಸ್ ನಡುವೆ ಅಂತರ ಇರಬೇಕು. ನ್ಯೂಸ್ ಮತ್ತು ವ್ಯೂಸ್ ಎರಡನ್ನೂ ಸೇರಿಸಿಬಿಟ್ಟರೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದರು.
ಪಕ್ಷಾಂತರ ದೊಡ್ಡ ಸಮಸ್ಯೆ : ಪಕ್ಷಾಂತರ ಕೂಡ ದೊಡ್ಡ ಸಮಸ್ಯೆ. ಪಕ್ಷಾಂತರ ನಿಷೇಧ ಕಾಯ್ದೆ ಕೂಡ ಪೂರ್ಣಮಟ್ಟದಲ್ಲಿ ಸಬಲವಾಗಿಲ್ಲ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋಗುತ್ತಾರೆ. ಆ ಸಮಯದಲ್ಲಿ ಯಾರಿಗೂ ಯಾವುದೇ ಹುದ್ದೆಗಳನ್ನು ನೀಡಬಾರದು. ಕಾನೂನಿನಲ್ಲಿ ಸ್ಪಷ್ಟತೆ ಕೂಡ ಇದ್ದರೆ ಇದಕ್ಕೆ ತಡೆ ಒಡ್ಡಬಹುದು. ಪಕ್ಷಾಂತರ ಮಾಡುವುದೇ ಕೆಲವರಿಗೆ ರುಚಿಸುತ್ತದೆ ಎಂದರು. ಸಂವಾದದಲ್ಲಿ ಸಂಸದ ಪಿ.ಸಿ. ಮೋಹನ್, ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಹೈಕೋರ್ಟ್ಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆ: ತಮಿಳುನಾಡಿನಲ್ಲಿ ಸಿಜೆಐ ಹೇಳಿದ್ದೇನು?