ಬೆಂಗಳೂರು: ಧಾರವಾಡದಲ್ಲಿನ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ಆಸ್ಪತ್ರೆಯಲ್ಲಿ ಎಂ.ಆರ್.ಐ ಸ್ಕ್ಯಾನಿಂಗ್ ಅಳವಡಿಸಲು ಹೈಕೋರ್ಟ್ನಿಂದ ಹಲವು ಸೂಚನೆ, ತರಾಟೆ ಪಡೆದ ಬಳಿಕ ರಾಜ್ಯ ಸರ್ಕಾರ ಇದೀಗ ಡಿಮ್ಹಾನ್ಸ್ನಲ್ಲಿ ಯಂತ್ರವನ್ನು ಸ್ಥಾಪಿಸಿದೆ.
ಡಿಮ್ಹಾನ್ಸ್ ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ 1996ರಲ್ಲಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ಪೀಠಕ್ಕೆ ರಾಜ್ಯ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ಹಾಜರಿದ್ದ ರಾಜ್ಯ ಸರ್ಕಾರದ ಪರ ವಕೀಲರು, ಹೈಕೋರ್ಟ್ ನಿರ್ದೇಶನದಂತೆ ಆಸ್ಪತ್ರೆಗೆ ಅಗತ್ಯವಿದ್ದ ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರ ಅಳವಡಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿದ್ದು, ವೈದ್ಯಕೀಯ ಅಧೀಕ್ಷಕರನ್ನೂ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಹಾಗೆಯೇ, ಯಂತ್ರ ಅಳವಡಿಸಿರುವ ಕುರಿತಂತೆ ಫೋಟೋ ಹಾಗೂ ವೈದ್ಯಕೀಯ ಅಧೀಕ್ಷಕರ ನೇಮಕಾತಿ ಆದೇಶದ ಪ್ರತಿಯನ್ನು ಪೀಠಕ್ಕೆ ಸಲ್ಲಿಸಿದರು.
ಆಸ್ಪತ್ರೆ ಮುಚ್ಚಿ ಎಂದಿದ್ದ ಕೋರ್ಟ್: 2021ರ ನವೆಂಬರ್ ತಿಂಗಳಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ 2022 ಮಾರ್ಚ್ 1ರ ವೇಳೆಗೆ ಡಿಮ್ಹಾನ್ಸ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆದೇಶಿಸಿತ್ತು. ಇದಕ್ಕೆ ಸರ್ಕಾರವೂ ಸಮ್ಮತಿಸಿತ್ತು. ಆದರೆ, ಎಂ.ಆರ್.ಐ ಯಂತ್ರ ಅಳವಡಿಸಲು ಕಾರಣಗಳನ್ನು ಹೇಳಿಕೊಂಡು ಬಂದಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಪೀಠ, ಆಸ್ಪತ್ರೆಯನ್ನೇ ಮುಚ್ಚಿಬಿಡಿ ನಿಮಗೆ ಇಂತಹ ತಾಪತ್ರಯಗಳೇ ಇರುವುದಿಲ್ಲ ಎಂದು ಟೀಕಿಸಿತ್ತು.
ನಂತರವೂ ಯಂತ್ರ ಅಳವಡಿಸದಿದ್ದಾಗ ಕಳೆದ ಏಪ್ರಿಲ್ 5ರಂದು ನಡೆದ ವಿಚಾರಣೆ ವೇಳೆ ಸರ್ಕಾರ ಮತ್ತು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಪೀಠ, ಕೆಲಸ ಮುಗಿಸುವವರೆಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ವೈದ್ಯಕೀಯ ಶಿಕ್ಷಣ) ಪ್ರಧಾನ ಕಾರ್ಯದರ್ಶಿ ಸಂಬಳ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ನಂತರ ತಪ್ಪದೇ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರಿಂದ ಆದೇಶ ಹಿಂಪಡೆದಿತ್ತು. ಇದೀಗ ಅಂತಿಮವಾಗಿ ಸರ್ಕಾರ ಆಸ್ಪತ್ರೆಯಲ್ಲಿ ಎಂ.ಆರ್.ಐ ಯಂತ್ರ ಅಳವಡಿಸುವುದರ ಜತೆಗೆ ಕೆಲ ಮೂಲ ಸೌಕರ್ಯಗಳನ್ನು ನೀಡಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಕೋವಿಡ್ ವ್ಯಾಕ್ಸಿನೇಷನ್ ರಿಪೋರ್ಟ್ ಕಡ್ಡಾಯವಲ್ಲ