ಬೆಂಗಳೂರು/ನವದೆಹಲಿ : ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ರನ್ನು ಭೇಟಿಯಾದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕೆಆರ್‌ಎಸ್ ಅಣೆಕಟ್ಟಿಗೆ ಅಕ್ರಮ ಗಣಿಗಾರಿಕೆಯಿಂದ ಬಂದೊದಗಿರುವ ಅಪಾಯದ ಕುರಿತು ಗಮನಕ್ಕೆ ತಂದರು. ಈ ವಿಚಾರವಾಗಿ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಈಗಾಗಲೇ ಟ್ವಿಟರ್ನಲ್ಲಿ 'ಸ್ಟಾಪ್ ಇಲ್ಲೀಗಲ್ ಮೈನಿಂಗ್, ಸೇವ್ ಕೆಆರ್‌ಡ್ಯಾಮ್' ಎನ್ನುವ ಅಭಿಯಾನ ಕೂಡ ಸಂಸದೆ ಸುಮಲತಾ ನೇತೃತ್ವದಲ್ಲಿ ನಡೆಯುತ್ತಿದೆ. ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಡ್ಯಾಂ ಸುತ್ತಮುತ್ತ ಭೂ ವಿಜ್ಞಾನಿಗಳು ಗಣಿಗಾರಿಕೆ ಅಪಾಯದ ಕುರಿತು ಅಧ್ಯಯನ ನಡೆಸಿದ್ದರು.
ರಾಜ್ಯ ಸರ್ಕಾರಕ್ಕೆ ಟ್ರಯಲ್ ಬ್ಲಾಸ್ಟ್ ನಡೆಸಿ ವರದಿ ನೀಡಿದ್ದ ಹಿರಿಯ ವಿಜ್ಞಾನಿಗಳ ತಂಡ ಡ್ಯಾಂನ 20 ಕಿ.ಮೀ. ವ್ಯಾಪ್ತಿಯಲ್ಲಿರೋ ಬೇಬಿಬೆಟ್ಟ, ಬನ್ನಂಗಾಡಿ, ನೀಲಕೊಪ್ಪಲು ಸೇರಿ ಹಲವು ಕಲ್ಲು ಕ್ವಾರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತ್ತು.
ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆ ಅಪಾಯದ ಕುರಿತು ಜಾರ್ಖಂಡ್‌ನಿಂದ ಬಂದಿದ್ದ ಹಿರಿಯ ಭೂವಿಜ್ಞಾನಿ ಡಾ. ಸಿ. ಸೋಮಲಿನಾ ನೇತೃತ್ವದ ತಂತ್ರಜ್ಞರ ತಂಡ, ಸ್ಥಳೀಯ ಜನರು ಸೇರಿದಂತೆ ಜಿಲ್ಲೆಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬೇಕೋ ಇಲ್ಲವೋ ಎನ್ನುವುದರ ಕುರಿತಾಗಿ ವಿಜ್ಞಾನಿಗಳ ವರದಿ ಮೇಲೆ ಸರ್ಕಾರ ನಿರ್ಧಾರ ಮಾಡಲಿದೆ.
ಸದ್ಯ ಜಿಲ್ಲೆಯ ರೈತರು, ಸಾರ್ವಜನಿಕರು ಸೇರಿದಂತೆ ಹಲವು ಸಂಘಟನೆಗಳಿಂದ ಗಣಿಗಾರಿಕೆ ಶಾಶ್ವತ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ. ಸಾಕಷ್ಟು ರಾಜಕೀಯ ಕೇಸರೆರಚಾಟಕ್ಕೂ ಕೆಆರ್‌ಎಸ್ ಪ್ರಕರಣ ಸಾಕ್ಷಿಯಾಗಿದೆ.