ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಅಂತಿಮ ಜೇಷ್ಠತಾ ಪಟ್ಟಿ ವಿಳಂಬದ ಕುರಿತಾಗಿ ಆಡಳಿತ ಪಕ್ಷದ ಶಾಸಕ ಎಂಪಿ ಕುಮಾರಸ್ವಾಮಿ ಅಧಿಕಾರಿಗಳ ವಿರುದ್ಧ ಗರಂ ಆದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಬಿ.ಕೆ ಪವಿತ್ರ ಪ್ರಕರಣದನ್ವಯ ಪರಿಷ್ಕರಣೆಗೊಳಿಸಿ ಜೇಷ್ಠತಾ ಪಟ್ಟಿ ಇನ್ನೂ ಪ್ರಕಟಿಸಿಲ್ಲ. ಇದರಿಂದ ಪಾಂಶುಪಾಲರಿಗೆ ವಾರ್ಷಿಕ ವೇತನ ಬಡ್ತಿ ದೊರೆಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ಕೊಡುತ್ತಾರೆ.
ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಬಿ.ಕೆ ಪವಿತ್ರ ಪ್ರಕರಣದಡಿ 6,400 ಹುದ್ದೆಗಳನ್ನು ಹಿಂಬಡ್ತಿ ಮಾಡಲಾಯಿತು. ಸುಮಾರು 13 ಜನ ಎಸ್ಸಿ, ಎಸ್ಟಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಮುಂಬಡ್ತಿ ನೀಡಲು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಉತ್ಸವ: ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ
ಇದಕ್ಕೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ, 2019ರಲ್ಲಿ ಈ ಪ್ರಕರಣದ ಆದೇಶ ಹೊರ ಬಿದ್ದಿದೆ. ಒಂದು ತಿಂಗಳಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‍ಗಳ ಪ್ರಾಂಶುಪಾಲರ (ಗ್ರೇಡ್ 1 ಮತ್ತು ಗ್ರೇಡ್2) ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.