ಬೆಂಗಳೂರು: ಈ ಬಾರಿ ಗಣಪತಿ ಹಬ್ಬಕ್ಕೆ ವಿನಾಯಿತಿ ಕೊಡಿ ಅಂತ ಸಿಎಂಗೆ ಕೇಳಿದ್ದೇವೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ರಿಯಾಯಿತಿ ಇರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಕಳೆದ ಸಲಕ್ಕಿಂತಲೂ ಹೆಚ್ಚು ವಿನಾಯಿತಿ ಕೊಡುವ ಭರವಸೆ ಇದೆ. ಕೋವಿಡ್ ನಿಯಮಾವಳಿಗಳ ಪಾಲನೆ ಮಾಡಬೇಕಿದೆ. ನಾಳೆ ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ ಎಂದರು.
ಬೆಳೆ ಪರಿಹಾರ ಹಣ ಬಿಡುಗಡೆ:
ಇದೇ ವೇಳೆ, ರೈತರಿಗೆ ಬೆಳೆ ಪರಿಹಾರ ಬಿಡುಗಡೆ ಮಾಡಲಾಗಿದೆ. 45,585 ರೈತರಿಗೆ 38.64 ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗುವುದು ಎಂದರು. ಕೇಂದ್ರದ ನೆರೆ ಅಧ್ಯಯನ ತಂಡದ ಜತೆ ಸಿಎಂ ಸಭೆ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ನೆರೆ ಅಧ್ಯಯನ ತಂಡಕ್ಕೆ ರಾಜ್ಯದ ಪ್ರವಾಹ, ಮಳೆ ಹಾನಿ ವಿವರ ನೀಡಿದ್ದೇವೆ. ಕೇಂದ್ರದಿಂದ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ನಾಳೆ, ನಾಡಿದ್ದು ಕೇಂದ್ರದ ಅಧ್ಯಯನ ತಂಡ ಐದು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ಹೆಚ್ಚು ಹಾನಿಯಾಗಿರುವ ಜಿಲ್ಲೆಗಳಿಗೆ ಭೇಟಿ ಮಾಡಿ ಪರಿಶೀಲಿಸಲಿದೆ. ನಮ್ಮ ಅಧಿಕಾರಿಗಳೂ ಕೇಂದ್ರದ ತಂಡದ ಜತೆಗಿರುತ್ತಾರೆ ಎಂದರು.
ತೌಕ್ತೆ ಚಂಡಮಾರುತ ಸಂದರ್ಭದಲ್ಲಿ ಇದೇ ತಂಡ ರಾಜ್ಯಕ್ಕೆ ಆಗಮಿಸಿತ್ತು. ತಂಡದ ಪ್ರವಾಸದ ಬಳಿಕ ಮತ್ತೊಂದು ಸಭೆ ಇರಲಿದೆ. ರಾಜ್ಯದಲ್ಲಾದ ಅತಿವೃಷ್ಟಿ, ಪ್ರವಾಹಕ್ಕೆ ₹5,690 ಕೋಟಿ ನಷ್ಟ ಆಗಿರುವ ಅಂದಾಜು ಮಾಡಲಾಗಿದೆ. ಎಸ್ಡಿಆರ್ಎಫ್ ಅಡಿ ₹795 ಕೋಟಿ ಪರಿಹಾರ ಬರಬೇಕಿದೆ ಎಂದರು.
ಓದಿ: ಆನ್ಲೈನ್ ಜೂಜು ನಿಷೇಧಿಸಲು ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆ ತೀರ್ಮಾನ