ಬೆಂಗಳೂರು : ನೈರುತ್ಯ ಮುಂಗಾರು ವಾಡಿಕೆಗಿಂತ ಒಂದು ವಾರ ವಿಳಂಬವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮೇ 3ನೇ ವಾರದವರೆಗೂ ಚೇತರಿಕೆಯಲ್ಲಿದ್ದ ಮಳೆ ಕೊನೆಯ ವಾರದಲ್ಲಿ ಕ್ಷೀಣಿಸಿದೆ. ಮೇ 27ರ ವೇಳೆಗೆ ಮುಂಗಾರು ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ, ಈತನಕ ಅಂತಹ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಜೂನ್ 10ರ ವೇಳೆಗೆ ಮುಂಗಾರು ಚುರುಕಾಗಲಿದೆ ಎನ್ನಲಾಗುತ್ತಿದೆ.
ಬದಲಿಗೆ ಮಳೆಯ ಪ್ರಮಾಣ ಇಳಿಮುಖವಾಗಿ ಒಣಹವೆ ಹೆಚ್ಚಾಗಿ ಕಂಡು ಬರುತ್ತಿದೆ. ಚಂಡಮಾರುತದ ಬೆನ್ನಲ್ಲೇ ಮೇ ತಿಂಗಳಿನಲ್ಲಿ ಎರಡು ವಾರಗಳ ಕಾಲ ಕುಂಭದ್ರೋಣ ಮಳೆಯಾಗಿ ರಾಜಧಾನಿ ಸೇರಿದಂತೆ ಹಲವು ನಗರಗಳಲ್ಲಿ ನೀರು ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಅಪಾರ ಪ್ರಮಾಣದ ಬೆಳೆ, ಆಸ್ತಿಪಾಸ್ತಿ ಹಾನಿಯೂ ಉಂಟಾಗಿತ್ತು.
ಬೇಸಿಗೆಯಲ್ಲೂ ಕೂಡ ತಂಪಾದ ವಾತಾವರಣ ನಿರ್ಮಾಣವಾಗುವ ರೀತಿಯಲ್ಲಿ ಎಡೆಬಿಡದೆ ನಿರಂತರ ಮಳೆಯಾಗಿತ್ತು. ಆ ಸಂದರ್ಭದಲ್ಲಿ ನೈರುತ್ಯ ಮುಂಗಾರು ವಾಡಿಕೆಗಿಂತ ಮುನ್ನ ಒಂದು ವಾರ ಕೇರಳವನ್ನು ಪ್ರವೇಶಿಸಿಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ರಾಜ್ಯದಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿದ್ದರೂ ನೈರುತ್ಯ ಮುಂಗಾರು ಆರಂಭವಾಗಿಲ್ಲ.
ಭಾರತೀಯ ಹವಾಮಾನ ಇಲಾಖೆಯು ಮುಂಗಾರು ಆರಂಭವಾಗಿರುವುದನ್ನು ಖಚಿತಪಡಿಸಿಲ್ಲ. ಮುಂಗಾರು ಜೂನ್ 1ರ ವೇಳೆಗೆ ಕೇಂದ್ರ ಕರಾವಳಿಯನ್ನು ಪ್ರವೇಶಿಸುವುದು ವಾಡಿಕೆ. ಮುಂಗಾರು ಮಳೆಯ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಕನಿಷ್ಠ ಒಂದು ವಾರ ತಡವಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲೂ ಮುಂಗಾರು ಆಗಮನ ವಿಳಂಬ : ಜೂನ್ 10ರ ವೇಳೆಗೆ ಮುಂಗಾರು ಚುರುಕಾಗಬಹುದು. ರಾಜ್ಯದಲ್ಲೂ ಮುಂಗಾರು ಆಗಮನ ವಿಳಂಬವಾಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಮುಂಗಾರು ಪೂರ್ವ ಮಳೆ ಚದುರಿದಂತೆ ಆಗುತ್ತಿದೆ. ಜೂನ್ 5 ರಿಂದ 6ರಂದು ಸ್ವಲ್ಪ ಹೆಚ್ಚಿನ ಪ್ರಮಾಣದ ಮಳೆಯಾಗಬಹುದು. ಜೂನ್ ಮೊದಲ ವಾರದಲ್ಲಿ ರಾಜ್ಯ ಪ್ರವೇಶಿಸುತ್ತಿದ್ದ ಮುಂಗಾರು ಈ ಬಾರಿ ಒಂದು ವಾರ ಕಾಲ ವಿಳಂಬವಾಗುವ ಮುನ್ಸೂಚನೆಗಳು ಕಂಡು ಬರುತ್ತಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೂರು ದಿನ ಮುಂಚಿತವಾಗಿ ಕೇರಳ ಪ್ರವೇಶಿಸಿದ ನೈರುತ್ಯ ಮಾನ್ಸೂನ್