ಆನೇಕಲ್ (ಬೆಂಗಳೂರು): ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎನ್ನುವ ವದಂತಿಯೊಂದು ಹಬ್ಬಿದ್ದು, ಆ ರೀತಿಯ ಆಲೋಚನೆಯನ್ನು ತಾವು ಮಾಡಿಲ್ಲವೆಂದು ವಿಧಾನ ಪರಿಷತ್ ಸದಸ್ಯ ಸಿ.ಆರ್ ಮನೋಹರ್ ಹೇಳಿದ್ದಾರೆ.
ಸರ್ಜಾಪುರ ಪಟ್ಟಣದಲ್ಲಿರುವ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಅಧಿಕಾರದಲ್ಲಿದ್ದಾಗ ನನ್ನನ್ನು ಕಡೆಗಣಿಸಲಾಗಿತ್ತು. ಆಗಲೂ ಪಕ್ಷಕ್ಕೆ ಮುಜುಗರವುಂಟು ಮಾಡುವ ಕೆಲಸ ನನ್ನಿಂದ ಆಗಿಲ್ಲ. ವಿಧಾನ ಪರಿಷತ್ ಸದಸ್ಯತ್ವದ ಅವಧಿ ಎರಡು ತಿಂಗಳಿದೆ. ಅವಧಿ ಮುಗಿದ ಬಳಿಕ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಬಳಿ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳುತ್ತೇನೆ. ಈಗಾಗಲೇ ಇತರೆ ಪಕ್ಷದವರು ನನ್ನನ್ನು ಆಹ್ವಾನಿಸಿರುವುದು ನಿಜ. ಆದರೆ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇವರಿಂದ ಪಕ್ಷಕ್ಕೆ ಪ್ರಯೋಜನವಿಲ್ಲ ಎಂದು ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿ, ಹಾಗೆ ಮಾತನಾಡಿದ್ದರೆ ಅದು ಸರಿಯಲ್ಲ. ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅವರಿಂದ ಈ ಮಾತನ್ನು ನಿರೀಕ್ಷಿಸಿರಲಿಲ್ಲ. ಅವರ ಕುರಿತು ಮಾತನಾಡುವಷ್ಟು ದೊಡ್ಡವರು ನಾವಲ್ಲ ಎಂದರು.
ಕೆಲವು ದಿನಗಳ ಹಿಂದೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ದೂರವಾಣಿ ಮೂಲಕ ಮಾತನಾಡಬೇಕೆಂದು ಹೇಳಿದ್ದರು. ಆದರೆ ಈವರೆಗೆ ಯಾವ ನಾಯಕರು ನನ್ನನ್ನು ಸಂಪರ್ಕಿಸಿಲ್ಲ ಎಂದು ಜೆಡಿಎಸ್ ಕುರಿತು ತಮಗಿರುವ ಅಸಹನೆಯನ್ನು ಮನೋಹರ್ ವ್ಯಕ್ತಪಡಿಸಿದರು.