ಬೆಂಗಳೂರು: ಆನೇಕಲ್, ಅತ್ತಿಬೆಲೆ ಹಾಗೂ ಬೊಮ್ಮಸಂದ್ರ ಪುರಸಭೆಗಳ 15 ಮಂದಿ ನಾಮನಿರ್ದೇಶಿತ ಸದಸ್ಯರಿಗೆ ವಿಧಾನಪರಿಷತ್ತಿನ ಬೆಂಗಳೂರು ನಗರ ಸ್ಥಳೀಯ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ಸಮ್ಮತಿಸಿರುವ ಹೈಕೋರ್ಟ್, ನ್ಯಾಯಾಲಯದ ಅನುಮತಿಯಿಲ್ಲದೆ ಚುನಾವಣಾ ಫಲಿತಾಂಶ ಪ್ರಕಟಿಸದಂತೆ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.
ನಾಮನಿರ್ದೇಶಿತ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಚುನಾವಣಾಧಿಕಾರಿಗೆ ನಿರ್ದೇಶಿಸುವಂತೆ ಕೋರಿ ವಿಧಾನ ಪರಿಷತ್ತಿನ ಕಾಂಗ್ರೆಸ್ ಅಭ್ಯರ್ಥಿ ಯೂಸೂಫ್ ಷರೀಫ್ ಸಲ್ಲಿಸಿರುವ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ವಾದಿಸಿ, ಅರ್ಜಿದಾರರು ತಕರಾರು ಇದ್ದಿದ್ದರೆ ಮತದಾರರ ಕರಡು ಅಥವಾ ಅಂತಿಮ ಪಟ್ಟಿ ಪ್ರಕಟಗೊಂಡಾಗ ಆಕ್ಷೇಪಣೆ ಸಲ್ಲಿಸಬೇಕಿತ್ತು. ಆದರೆ, ಮತದಾನಕ್ಕೆ ಎರಡು ದಿನ ಇರುವಾಗ ಅರ್ಜಿ ಸಲ್ಲಿಸಿದ್ದಾರೆ. ಇನ್ನು ನಾಮನಿರ್ದೇಶಿತ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಈಗ ಸೇರಿಸಿರುವುದಲ್ಲ. ಬದಲಿಗೆ, 2015ರ ಚುನಾವಣೆ ವೇಳೆಯೇ ಸೇರಿಸಲಾಗಿತ್ತು. ಆಗ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. ವಿಪರ್ಯಾಸವೆಂದರೆ ಈಗ ಕಾಂಗ್ರೆಸ್ ಅಭ್ಯರ್ಥಿ ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕನ್ನು ಪ್ರಶ್ನಿಸಿದ್ದಾರೆ. ಆಗ ಸಮಸ್ಯೆ ಆಗದಿದ್ದ ನಾಮನಿರ್ದೇಶಿತ ಸದಸ್ಯರು, ಈಗ ಸಮಸ್ಯೆಯಾಗಿ ಕಾಣುತ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಅರ್ಜಿ. ಹೀಗಾಗಿ ಅರ್ಜಿಗೆ ವಿಚಾರಣಾ ಮಾನ್ಯತೆ ಇಲ್ಲವಾದ್ದರಿಂದ ತಿರಸ್ಕರಿಸಬೇಕು ಎಂದು ಕೋರಿದರು.
ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಾದಿಸಿ, ನಾಮನಿರ್ದೇಶಿತ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿರುವುದು ಸಂವಿಧಾನದ ಪರಿಚ್ಛೇದ 243 (ಆರ್) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ-1965ರ ಸೆಕ್ಷನ್ 27ಕ್ಕೆ ವಿರುದ್ಧವಾಗಿದೆ. ಆದ್ದರಿಂದ ನಾಮನಿರ್ದೇಶಿತ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸಿರುವುದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು. ಚುನಾವಣಾ ಆಯೋಗದ ಪರ ಎಸ್.ಆರ್ ದೊಡ್ಡವಾಡ ವಾದ ಮಂಡಿಸಿದರು.
ಎಲ್ಲರ ವಾದ ಪ್ರತಿವಾದ ಆಲಿಸಿದ ಪೀಠ, ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭ ಆಗಿರುವುದರಿಂದ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು. ಹೀಗಾಗಿ, ನಿಗದಿತ ವೇಳಾಪಟ್ಟಿಯಂತೆ ವಿಧಾನ ಪರಿಷತ್ತಿನ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆ ನಡೆಯಲಿ. ಅರ್ಜಿಯಲ್ಲಿ ಪ್ರಶ್ನಿಸಿರುವ ಅತ್ತಿಬೆಲೆ, ಆನೇಕಲ್ ಹಾಗೂ ಬೊಮ್ಮಸಂದ್ರದ 15 ಮಂದಿ ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಲಿ. ಆದರೆ, ಇವರ ಮತದಾನಕ್ಕೆ ಚುನಾವಣಾಧಿಕಾರಿಗಳು ಪ್ರತ್ಯೇಕ ಮತ ಪೆಟ್ಟಿಗೆ ವ್ಯವಸ್ಥೆ ಮಾಡಬೇಕು. ಈ 15 ನಾಮನಿರ್ದೇಶಿತ ಸದಸ್ಯರ ಮತಗಳನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟಿಸಬಾರದು ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿ, ವಿಚಾರಣೆ ಮುಂದೂಡಿತು.
(ಇದನ್ನೂ ಓದಿ: ರಾಜಸ್ಥಾನದ ಫೋರ್ಟ್ ಬವೇರಾದಲ್ಲಿ ಸಪ್ತಪದಿ ತುಳಿದ ಕತ್ರಿನಾ ಕೈಫ್-ವಿಕ್ಕಿ ಕೌಶಲ್)