ಬೆಂಗಳೂರು: ಜಯನಗರ ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲಾದ ಹಿನ್ನೆಲೆ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು.
ಓದಿ: ಘಟನೆ ಕುರಿತು ತನಿಖೆಯಾಗದೆ ರೈತರನ್ನು ದೂಷಿಸುವುದು ತಪ್ಪು: ಕುಮಾರಸ್ವಾಮಿ
ಜಯನಗರದ ಮಯ್ಯಾಸ್ ಹೋಟೆಲ್ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಸುಳ್ಳು ಎಫ್ಐಆರ್ ರದ್ದು ಮಾಡುವಂತೆ ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಉಗ್ರಪ್ಪ, ಬಿ.ಕೆ.ಹರಿಪ್ರಸಾದ್, ರಿಜ್ವಾನ್ ಅರ್ಹದ್, ಎಂಎಲ್ಸಿ ನಾರಾಯಣಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರತಿಭಟನೆ ನಂತರ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸೌಮ್ಯ ರೆಡ್ಡಿ ಮೇಲೆ ನಿರಂತರವಾಗಿ ಅಪಪ್ರಚಾರ ಮಾಡ್ತಿದ್ದಾರೆ. ರೌಡಿ ಎಂಎಲ್ಎ ಅಂದಿದ್ದಾರೆ. ಆದರೆ ಸೌಮ್ಯ ರೆಡ್ಡಿ ಏನು ರೌಡಿ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇನ್ನು ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದರೆ ಖಲಿಸ್ಥಾನದವರು ಅಂತ ಅಪಪ್ರಚಾರ ಮಾಡ್ತಿದ್ದಾರೆ. ದೇಶದಲ್ಲಿ ಭಾರೀ ಅಪಪ್ರಚಾರ ಮಾಡೋದೆ ಬಿಜೆಪಿಯವರ ಕೆಲಸ ಆಗಿದೆ ಎಂದು ಕಿಡಿಕಾರಿದರು.
ಹಾಗೇ ಸೌಮ್ಯ ರೆಡ್ಡಿ ಕೂಡ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಬಿಜೆಪಿಯೇ ಪೊಲೀಸರ ಮೂಲಕ ಹಲ್ಲೆ ಮಾಡಲು ಯತ್ನಿಸಿರೋ ಬಗ್ಗೆ ಹಲವರು ಹೇಳಿದ್ದಾರೆ. ಶಾಸಕಿಯ ದೂರಿಗೆ ಬೆಲೆಯೇ ಇಲ್ಲದಂತಾಗಿದೆ. ಸರ್ಕಾರಕ್ಕೆ ತಾಕತ್ತಿದ್ದರೆ ಬಿಜೆಪಿಯ ಕಾರ್ಪೋರೇಟರ್ ನಡೆಸುತ್ತಿರುವ ವಸೂಲಿ ಕುರಿತು ಕೇಸ್ ದಾಖಲಿಸಿ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು. ತಮ್ಮ ಮೇಲೆ ಆಗಿರುವ ಎಫ್ಐಆರ್ ಕುರಿತು ನಿಷ್ಠೆಯಿಂದ ತನಿಖೆ ನಡೆಸಲಿ, ಯಾರದ್ದೋ ಒತ್ತಡಕ್ಕೆ ನನ್ನ ಮೇಲೆ ಸುಳ್ಳು ಅಪವಾದ ಮಾಡೋದು ಬೇಡ ಎಂದು ಹೇಳಿದರು.