ಬೆಂಗಳೂರು : ಶಾಸಕರ ಭವನದಲ್ಲಿ ಕರ್ತವ್ಯನಿರತ ಹೊಯ್ಸಳ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪವನ್ನ ಮೂಡಿಗೆರೆ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ತಳ್ಳಿ ಹಾಕಿದ್ದಾರೆ.
ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕೈ ಹಿಡಿದು ಅತಿರೇಖ ವರ್ತನೆ ಮಾಡಿದರು. ಇದು ಸಿಂಪಲ್ ಮ್ಯಾಟರ್. ನಾನೇ ಕ್ಷಮೆ ಕೇಳುವಂತೆ ಸೂಚಿಸಿದೆ ಎಂದರು.
ನಿನ್ನೆ ರಾತ್ರಿ ನಾನು ಹೋಟೆಲ್‌ಗೆ ಊಟಕ್ಕೆ ಹೋಗಿದ್ದೆ. ಬರುವಾಗ ರಾತ್ರಿ ಸುಮಾರು 10.30-11 ಗಂಟೆ ಆಗಿತ್ತು. ಹೊಯ್ಸಳ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಪೊಲೀಸ್ ಕಾನ್ಸ್ಟೇಬಲ್ಗೆ ಸೈಡಿಗೆ ಬಾರಯ್ಯ ಅಂದೆ. ಅವರಿಗೆ ನಾನು ಶಾಸಕ ಅನಿಸಿಲ್ಲ. ಹಾಗಾಗಿ, ನಿನಗೇನು ಕೆಲಸ ಅಂದ್ರು.
ಖಾಸಗಿ ರೂಮ್ ಇದೆ ಎಂದು ತಿಳಿಸಿದೆ. ಆಗ ಅವರು ಫೋಟೋ ತೆಗೆಯಲು ಮುಂದಾದ್ರು. ನಂತರ ಇಲಾಖೆಯವರೆಲ್ಲ ಬಂದರು. ಬಳಿಕ ಕ್ಷಮೆ ಕೇಳಿದ ಎಂದು ಘಟನೆ ಬಗ್ಗೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಗಸ್ತಿನಲ್ಲಿದ್ದ ಹೊಯ್ಸಳ ಪೊಲೀಸ್ ಸಿಬ್ಬಂದಿ ಮೇಲೆ ದರ್ಪ ತೋರಿದ ಶಾಸಕ ಕುಮಾರಸ್ವಾಮಿ
ಅವರು ನನ್ನನ್ನು ಶಾಸಕ ಅಲ್ಲ ಅಂದುಕೊಂಡಿದ್ದೇ ಇಷ್ಟಕ್ಕೆಲ್ಲ ಕಾರಣ. ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ. ನಾನು ಎಲ್ಲರ ತರ ಕುಡಿದುಕೊಂಡು ಬಂದು ಗಲಾಟೆ ಮಾಡೋನು ಅಲ್ಲ ಎಂದು ತಿಳಿಸಿದರು.
ಘಟನೆ : ವಿಧಾನಸೌಧದ ಬಳಿ ನೈಟ್ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ನರಸಿಂಹ ಮೂರ್ತಿ ಎಂಬುವರ ಮೇಲೆ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ನಿನ್ನೆ ತಡರಾತ್ರಿ ಶಾಸಕರ ಭವನದಿಂದ ಶಾಸಕ ಎಂ.ಪಿ ಕುಮಾರಸ್ವಾಮಿ ಕಾರಿನಲ್ಲಿ ಹೊರ ಬಂದಿದ್ದ ಸಂದರ್ಭದಲ್ಲಿ ಹೊಯ್ಸಳ ವಾಹನ ನಿಂತಿತ್ತು.
ಈ ಸಮಯದಲ್ಲಿ ಪಾರ್ಕಿಂಗ್ ವಿಚಾರವಾಗಿ ಗಲಾಟೆಯಾಗಿದೆ ಎಂದು ಹೇಳಲಾಗುತ್ತಿದೆ. ನೈಟ್ ಬೀಟ್‌ನಲ್ಲಿದ್ದ ಕಾನ್ಸ್‌ಟೇಬಲ್ ಚಂದ್ರಶೇಖರ್, ಹೆಚ್‌ಪಿ ನರಸಿಂಹಮೂರ್ತಿ ಅವರಿಗೆ ಅವಾಚ್ಯ ಶಬ್ದಗಳಿಂದ ಶಾಸಕರು ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪೊಲೀಸ್ ಸಿಬ್ಬಂದಿ ಶಾಸಕರ ಗುರುತು ಸಿಗದೇ ತಾವ್ಯಾರು ಎಂದು ಕೇಳಿದ್ದಾರೆ. ನಿಮ್ಮ ಐಡಿ ತೋರಿಸಿ ಎಂದು ಅತಿರೇಖದಿಂದ ಕೇಳಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಎಸಿಪಿ ಸ್ಥಳಕ್ಕೆ ಆಗಮಿಸಿ, ಶಾಸಕರನ್ನು ಮತ್ತು ಪೊಲೀಸ್ ಸಿಬ್ಬಂದಿಯನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ