ಬೆಂಗಳೂರು: ಮೂರು ಪಿಡುಗುಗಳು ಕರ್ನಾಟಕದ ರಾಜಕೀಯ ವ್ಯವಸ್ಥೆಯನ್ನು ಹಾಳು ಮಾಡಿವೆ. ಒಂದು ಗಣಿಗಾರಿಕೆ, ಎರಡನೇಯದ್ದು ರಿಯಲ್ ಎಸ್ಟೇಟ್, ಮೂರನೇಯದ್ದು ಜಾತಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವ್ಯಾಖ್ಯಾನಿಸಿದರು. ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ವ್ಯವಸ್ಥೆ ಹಾಳಾಗಿರುವುದು ಗಣಿಗಾರಿಕೆಯಿಂದ. ಗಣಿ ಉದ್ಯಮಿಗಳು ಒಮ್ಮಿಂದೊಮ್ಮೆಲೆ ಎದ್ದು ಬಂದರು. ಸಾಮೂಹಿಕ ವಿವಾಹ ಕಾರ್ಯಕ್ರಮಗಳು, ಬಡ ವಿದ್ಯಾರ್ಥಿಗಳಿಗೆ ಪಾಸ್ ಹಂಚುವ ಕಾರ್ಯಕ್ರಮ ತರಲಾಯಿತು. ಇದರಿಂದಲೂ ರಾಜ್ಯದ ವ್ಯವಸ್ಥೆ ಹಾಳಾಯಿತು ಎಂದರು.
1990ರಲ್ಲಿ ನಾನು ಒಂದು ಪೋಲಿಂಗ್ ಬೂತ್ಗೆ 50 ರೂ. ಕೊಟ್ಟಿದ್ದೆ. 8.50 ಲಕ್ಷ ರೂ.ದಲ್ಲಿ ಲೋಕಸಭೆಗೆ ಆರಿಸಿ ಬಂದಿದ್ದೆ. ಆದರೆ ಇಂದು ಗ್ರಾಮ ಪಂಚಾಯತಿ ಸದಸ್ಯ 8.50 ಲಕ್ಷ ರೂ.ಖರ್ಚು ಮಾಡಿದರೂ ಆಗುವುದಿಲ್ಲ. ಆರತಿ ತಟ್ಟೆಗಳು ನಮಗೆ ಸ್ವಭಾವ ಕಲಿಸಿ ಬಿಟ್ಟಿತು. ಆ ಆರತಿ ತಟ್ಟೆಯಲ್ಲಿ ಒಂದೊಂದು ಸಾವಿರ ನೋಟುಗಳಿರುತ್ತವೆ. 150 ಮಂದಿ ಹೆಣ್ಣು ಮಕ್ಕಳು ಆರತಿ ತಟ್ಟೆ ಹಿಡಿದು ಸಾಲಾಗಿ ನಿಲ್ಲುತ್ತಾರೆ. ದುಡ್ಡಿನ ಎದುರು ನಾನು ಎಂಪಿ ಚುನಾವಣೆಯಲ್ಲಿ ಸೋತು ಬಿಟ್ಟೆ. ಆಡು ಮುಟ್ಟದ ಎಲೆ ಇಲ್ಲ, ಯತ್ನಾಳ್ ತಿರುಗಾಡದ ಹಳ್ಳಿ ಇಲ್ಲ ಎಂದು ಪ್ರಖ್ಯಾತಿಯಾಗಿದ್ದೆ. ಆದರೆ ನಾನು ಮುನ್ನೂರು ಮತಗಳಿಂದ ಸೋಲಬೇಕಾಯಿತು ಎಂದು ಸ್ಮರಿಸಿದರು.
ನಾವು ನೀತಿ ಸಂಹಿತೆಯಲ್ಲೇ ಕಾಲಹರಣ ಮಾಡುತ್ತೇವೆ. ವರ್ಷದಲ್ಲಿ ಆರು ತಿಂಗಳು ನೀತಿ ಸಂಹಿತೆ ಬರುತ್ತದೆ. ಅದನ್ನೇ ಅಧಿಕಾರಿಗಳು ಕಾಯುತ್ತಿರುತ್ತಾರೆ. ನೀತಿ ಸಂಹಿತೆಗೂ ಇತಿಮಿತಿ ಇರಬೇಕು. ಇದರಲ್ಲೂ ಬದಲಾವಣೆ ಆಗಬೇಕು. ಅಭಿವೃದ್ಧಿಗೆ ಇದು ಅಡ್ಡಗಾಲಾಗಿದೆ. ಸಿಎಂ ಆಗ ಬೇಕಾದರೆ ಏನು ಆಗಬೇಕು ಎಂದು ಕೇಳ್ತಾರೆ. ಸಿಎಂ ಆಗಬೇಕಾದರೆ 2-3 ಸಾವಿರ ಕೋಟಿ ರೂ. ಇಡಬೇಕು ಅಂತಾರೆ. ಸಿಎಂ ಆಗಬೇಕಾದರೆ ಮೂರು ಸಾವಿರ ಕೊಟ್ಟರೆ ಬಳಿಕ ರಾಜ್ಯವನ್ನು ಲೂಟಿ ಹೊಡೆಯಬೇಕು ಎಂದು ಟೀಕಿಸಿದರು.
ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೇನು?: ದೇಶದ ವಿರುದ್ಧ ಮಾತನಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯನಾ? ಎಂದು ಪ್ರಶ್ನಿಸಿದ ಯತ್ನಾಳ್, ಮತದಾನ ಕಡ್ಡಾಯ ಮಾಡಬೇಕು. ಆಧಾರ್ ಕಾರ್ಡನ್ನು ವೋಟರ್ ಐಡಿಗೆ ಲಿಂಕ್ ಮಾಡಬೇಕು. ಮತದಾನ ಮಾಡದೇ ಇರುವವನಿಗೆ ಸರ್ಕಾರದ ಸೌಲಭ್ಯ ನೀಡಬಾರದು ಎಂದು ಆಗ್ರಹಿಸಿದರು.
ಪತ್ರಿಕಾ ರಂಗ ಹಾಳಾಗಿದೆ: ಪತ್ರಿಕಾ ರಂಗ ಚುನಾವಣೆ ಬಂದ ಬಳಿಕ 5-10 ಲಕ್ಷ ಪ್ಯಾಕ್ ಮಾಡುತ್ತವೆ. 'ಧರೆಗಿಳಿದು ಬಂದ ಯತ್ನಾಳ್, ಅಭಿವೃದ್ಧಿಯ ಹರಿಕಾರ ಯತ್ನಾಳ್..ರಾಜಾಹುಲಿ ಬೆಟ್ಟದ ಹುಲಿ, ಆ ಹುಲಿ ಈ ಇಲಿ'..ಎಲ್ಲವೂ 10 ಲಕ್ಷದ ಪ್ಯಾಕೇಜ್. ಫುಲ್ ಪೇಜ್ ಆದರೆ 10.50 ಲಕ್ಷ ಆಗುತ್ತದೆ. ನಿಮಗೆ ಶೇ. 10 ರಷ್ಟು ಡಿಸ್ಕೌಂಟ್ ಆದರೆ 9.70 ಲಕ್ಷ ಆಗುತ್ತದೆ ಎಂದು ಅವರೇ ಬರೆಯುತ್ತಾರೆ. ಎಲ್ಲವನ್ನೂ ಟಿವಿ, ಪತ್ರಿಕೆಯವರೇ ಬರೆಯುತ್ತಾರೆ.
ಪರಿಷತ್ನಲ್ಲಿ ನಿಂತಿದ್ದಾಗ ಟಿವಿಯಲ್ಲಿ ಯತ್ನಾಳ್ ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎಂದು ವರದಿ ಮಾಡಿದ್ದರು. ನಾನು ಅವನಿಗೆ ಕರೆ ಮಾಡಿ ನೀನು ಯಾರು ನನ್ನ ರಾಜಕೀಯ ಅಂತ್ಯ ಮಾಡುವವನು?, ನೀವು ಸ್ಟುಡಿಯೋದಲ್ಲಿ ಕುಳಿತು ಏನು ಮಾತನಾಡುವುದು ಎಂದು ಕೇಳಿದೆ. ನಾಳೆ ಗೆದ್ದು ಬರುತ್ತೇನೆ. ಅಲ್ಲಿಗೆ ಬಂದು ಮುಖಕ್ಕೆ ಹೊಡೆಯುತ್ತೇನೆ ಎಂದಿದ್ದೆ. ಮರುದಿನ ನಾನು ಪರಿಷತ್ನಲ್ಲಿ ಗೆದ್ದೆ. ಬಳಿಕ ಅವರಿಗೆ ಕರೆ ಮಾಡಿದೆ. ಆಗ ಟಿವಿಯವರು ನಿಮ್ಮ ಬಗ್ಗೆ ವಿಶೇಷ ವರದಿ ಮಾಡುತ್ತೇವೆ ಎಂದು ಉಲ್ಟಾ ಹೊಡೆದರು. ಪತ್ರಿಕಾ ರಂಗ ಕೂಡ ಹಾಳಾಗಿದೆ ಎಂದು ಯತ್ನಾಳ್ ಆರೋಪಿಸಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ರಾಮನ ಲೆಕ್ಕ, ಕೃಷ್ಣನ ಲೆಕ್ಕ, ಭೀಮನ ಲೆಕ್ಕದ ಸ್ವಾರಸ್ಯಕರ ಚರ್ಚೆ: ವಿಡಿಯೋ