ಬೆಂಗಳೂರು: ವೇಗದ ಚಾಲನೆ ಮಾಡಿ ಸಂಚಾರಿ ನಿಯಮ ಉಲ್ಲಂಘಿಸಿ ಮಾಧ್ಯಮಗಳ ಮೇಲೆ ಹರಿಹಾಯ್ದು, ಪುತ್ರಿ ಮಾಡಿದ್ದ ತಪ್ಪಿಗೆ ಅವರ ತಂದೆ ಮಾಜಿ ಸಚಿವ, ಶಾಸಕ ಅರವಿಂದ ಲಿಂಬಾವಳಿ ಕ್ಷಮೆ ಯಾಚಿಸಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳು ತನ್ನ ಸ್ನೇಹಿತರು ಜತೆ ಹೋಗುತ್ತಿದ್ದಾಗ ಕ್ಯಾಪಿಟಲ್ ಹೋಟೆಲ್ ಬಳಿ ಪೋಲಿಸರು ತಡೆದಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದೇ ಹೋಟೆಲ್ನಲ್ಲಿ ಇದ್ದ ಕಾರಣ ಇಲ್ಲಿ ಪೊಲೀಸರ ಬಂದೋಬಸ್ತ್ ಇತ್ತು. ಡ್ರೈವ್ ಮಾಡಬೇಕಾದರೆ ಓವರ್ ಸ್ಪೀಡ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದಕ್ಕೆ ದಂಡ ಕೂಡ ಕಟ್ಟಲಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಪುತ್ರಿಯ ಅಪರಾಧ ಕುರಿತು ಸ್ಪಷ್ಟನೆ ನೀಡಿದರು.
ಇನ್ನು ಮಾಧ್ಯಮಗಳಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ನನ್ನ ಮಗಳು ಸರ್, ಸರ್ ಅಂತಾ ಮಾತನಾಡಿದ್ದಾರೆ. ಅದು ವಿಡಿಯೋದಲ್ಲಿ ಇದೆ. ಆದರೂ ಮಾಧ್ಯಮಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಮ್ಮ ಮನೆತನದ ಇತಿಹಾಸ ಹಾಗೇನೂ ಇಲ್ಲ. ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಮನವಿ ಮಾಡುತ್ತಾ ಪುತ್ರಿ ಮಾಡಿದ ತಪ್ಪಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಿದರು.
ನಿನ್ನೆ(ಗುರುವಾರ) ಸಂಜೆ ನಗರದ ಕ್ಯಾಪಿಟಲ್ ಹೋಟೆಲ್ ಬಳಿ ವೇಗವಾಗಿ ಬರುತಿದ್ದ ಬಿಎಂಡಬ್ಲ್ಯೂ ಕಾರನ್ನು ಕಬ್ಬನ್ ಪಾರ್ಕ್ ಸಂಚಾರ ಠಾಣಾ ಪೊಲೀಸರು ತಡೆದು ದಂಡ ವಿಧಿಸಿದ್ದರು. ಈ ವೇಳೆ ಕಾರಿನಲ್ಲಿದ್ದ ಶಾಸಕರ ಪುತ್ರಿ ಪೊಲೀಸರೊಂದಿಗೆ ಕೆಲಕಾಲ ವಾಗ್ವಾದ ನಡೆಸಿದ್ದರು.
ಇದನ್ನೂ ಓದಿ: ಟ್ರಾಫಿಕ್ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡ ಶಾಸಕ ಲಿಂಬಾವಳಿ ಪುತ್ರಿ