ಬೆಂಗಳೂರು/ಬೆಳಗಾವಿ: ನಗರದ ಸ್ಯಾಂಕಿ ಕೆರೆ ವೃತ್ತದಲ್ಲಿರುವ ಛತ್ರಪತಿ ಶಿವಾಜಿ ಸ್ಮಾರಕಕ್ಕೆ ಕಿಡಿಗೇಡಿಗಳು ಅಮಾನಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ ಎನ್ನಲಾಗ್ತಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ವೈರಲ್ ಆದ ಬಳಿಕ ಬೆಳಗಾವಿಯಲ್ಲಿ ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ.
ಬೆಳಗಾವಿಯಲ್ಲಿ ಕೆಲ ಪುಂಡರು ಕರ್ನಾಟಕದ ಬಾವುಟಕ್ಕೆ ಬೆಂಕಿ ಹಚ್ಚಿ ಸುಟ್ಟಿರುವ ಹಿನ್ನೆಲೆಯಲ್ಲಿ ನಗರದ ಸ್ಯಾಂಕಿ ಕೆರೆ ಜಂಕ್ಷನ್ನಲ್ಲಿ ಇರುವ ಶಿವಾಜಿ ಮಹಾರಾಜರ ಸ್ಮಾರಕಕ್ಕೆ ಕಿಡಿಗೇಡಿಗಳು ಅವಮಾನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗ್ತಿದೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಯನ್ನು ಖಂಡಿಸಿ ಎಂಇಎಸ್ ಕಾರ್ಯಕರ್ತರು ಸಂಭಾಜಿ ವೃತ್ತದಲ್ಲಿ ಜಮಾಯಿಸಿ ಪೊಲೀಸರ ಮೇಲೆ ಮತ್ತು ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.
ಬೆಂಗಳೂರಲ್ಲಿ ನಡೆದ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಚುನಾವಣೆ ಮುಂದೂಡಿರುವುದಾಗಿ ಹೈಕೋರ್ಟ್ಗೆ ಮಾಹಿತಿ ನೀಡಿದ ಭಾರತೀಯ ವಕೀಲರ ಪರಿಷತ್