ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಡೆಸಿಕೊಡುತ್ತಿರುವ 'ಕನ್ನಡದ ಕೋಟ್ಯಧಿಪತಿ' ಸಾಕಷ್ಟು ಜನಮನ್ನಣೆ ಗಳಿಸಿದೆ. ಈ ಕಾರ್ಯಕ್ರಮದಿಂದ ವೀಕ್ಷಕರಿಗೆ ಮನರಂಜನೆ ಜೊತೆಗೆ ಜ್ಞಾನ ಕೂಡಾ ದೊರೆಯುತ್ತಿದೆ.
![Kannadada Kotyadhipati latest updates, ಕನ್ನಡದ ಕೋಟ್ಯಧಿಪತಿಯಲ್ಲಿ 6 ಲಕ್ಷ ಗೆದ್ದ ಶಾಲಾ ಬಾಲಕ](https://etvbharatimages.akamaized.net/etvbharat/prod-images/kn-bng-03-kk-tejas-minsuresh-ka10018_05112019200904_0511f_1572964744_129.jpg)
ಈ ತಿಂಗಳಲ್ಲಿ ಪ್ರಸಾರವಾಗುತ್ತಿರುವ ಸಂಚಿಕೆ ಬಹಳ ವಿಭಿನ್ನವಾಗಿದೆ. ಕನ್ನಡ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಮತ್ತೊಂದು ವಿಶೇಷ. ಹಾಸನ ಜಿಲ್ಲೆಯ 10 ನೇ ತರಗತಿ ವಿದ್ಯಾರ್ಥಿ ಕೆ.ಎನ್. ತೇಜಸ್ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, 6.4 ಲಕ್ಷ ರೂಪಾಯಿ ಗೆದ್ದಿದ್ದಾನೆ. ಈ ಹಣದಿಂದ ಏನು ಮಾಡುತ್ತೀಯ...? ಎಂದು ಪುನೀತ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಾಲಕ, ಪ್ರತಿ ವರ್ಷ ನಮ್ಮ ಶಾಲಾ ಆವರಣದಲ್ಲಿ 150 ಗಿಡಗಳನ್ನು ನೆಡುತ್ತೇವೆ. ಆದರೆ ಹಸುಗಳು ದಾಳಿ ನಡೆಸಿ ಎಲ್ಲವೂ ಹಾಳಾಗುತ್ತಿದೆ. ಹಾಗಾಗಿ ಈ ಹಣದಿಂದ ನಮ್ಮ ಶಾಲೆಗೆ ಕಾಂಪೌಂಡ್ ಕಟ್ಟಿಸಬೇಕು ಎಂದುಕೊಂಡಿದ್ದೇನೆ ಎಂದು ವಿದ್ಯಾರ್ಥಿ ಹೇಳಿದ್ದ. ಈ ಎಪಿಸೋಡ್ ಬಹಳ ಸುದ್ದಿಯಾಗಿತ್ತು.
ತೇಜಸ್ಗೆ ತನ್ನ ಶಾಲೆ ಮೇಲೆ ಇರುವ ಅಭಿಮಾನವನ್ನು ತಿಳಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ತೇಜಸ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಾವೇ ಖುದ್ದು ಹಾಸನ ಜಿಲ್ಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (CEO) ಮತ್ತು ಡಿಡಿಪಿಐ ಜೊತೆ ಮಾತನಾಡಿ ಬಾಲಕ ತೇಜಸ್ ಮನೆಗೆ ಹೋಗಿ ಆತನನ್ನು ಭೇಟಿಯಾಗಿ ಬಂದಿದ್ದಾರೆ. ಚಿಕ್ಕವಯಸ್ಸಿನಲ್ಲೇ ಆತನ ದೊಡ್ಡ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಆ ಹಣವನ್ನು ಆತನ ಮುಂದಿನ ಶಿಕ್ಷಣಕ್ಕೇ ಉಪಯೋಗಿಸುವಂತೆ ಹೇಳಿ ಬಂದಿದ್ದಾರೆ. ಜೊತೆಗೆ ನರೇಗಾ ಯೋಜನೆಯಡಿ ಆ ಬಾಲಕನ ಶಾಲೆಯ ಕಾಂಪೌಂಡ್ ಕೆಲಸವನ್ನು ಕೂಡಲೇ ಪ್ರಾರಂಭಿಸಬೇಕೆಂದು ಸೂಚಿಸಿದ್ದಾರೆ. ಸುರೇಶ್ ಕುಮಾರ್ ಅವರ ಈ ಕೆಲಸಕ್ಕೆ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
![Minister Suresh kumar praised school boy decision, ಶಾಲಾ ಬಾಲಕನ ನಿರ್ಧಾರ ಮೆಚ್ಚಿದ ಶಿಕ್ಷಣ ಸಚಿವ](https://etvbharatimages.akamaized.net/etvbharat/prod-images/kn-bng-03-kk-tejas-minsuresh-ka10018_05112019200904_0511f_1572964744_616.jpg)