ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಮೌರ್ಯ ಸರ್ಕಲ್ನಿಂದ ಫ್ರೀಡಂ ಪಾರ್ಕ್ವರೆಗೆ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಒಕ್ಕೂಟ ಪ್ರತಿಭಟನೆ ನಡೆಸಿದ ಹಿನ್ನೆಲೆ ಪ್ರತಿಭಟನಾಕಾರರೊಂದಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಭೆ ನಡೆಸಿದರು.
ಸಭೆ ಬಳಿಕ ಮಾಹಿತಿ ನೀಡಿದ ಸಚಿವರು, ಖಾಸಗಿ ಶಿಕ್ಷಣ ಸಂಸ್ಥೆಗಳ ವಾರ್ಷಿಕ ನವೀಕರಣ ಪ್ರಕ್ರಿಯೆ ಮುಂದಿನ ಶೈಕ್ಷಣಿಕ ಸಾಲಿನಿಂದ ಆನ್ಲೈನ್ ಮೂಲಕವೇ ನಿರ್ವಹಿಸಲಾಗುವುದು. ಖಾಸಗಿ ಶಾಲೆಗಳು ಶಿಕ್ಷಣ ವ್ಯವಸ್ಥೆಯ ಪ್ರಮುಖ ಭಾಗ. ಹಾಗಾಗಿ ಯಾವುದೇ ಕಾರಣಕ್ಕೂ ಅನಗತ್ಯ ಶೋಷಣೆಗೊಳಗಾಗಬಾರದು. ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸುಪ್ರೀಂ ಕೋರ್ಟ್ ಆದೇಶ ಹಾಗೂ ಮಾರ್ಗದರ್ಶನದಂತೆ ನವೀಕರಣ ಪ್ರಕ್ರಿಯೆಯಲ್ಲಿ ಸುರಕ್ಷತಾ ಕ್ರಮ ಕಡ್ಡಾಯ. ಅವುಗಳನ್ನು ಪಾಲಿಸಬೇಕಾಗಿರುವುದು ಆಡಳಿತ ಸಂಸ್ಥೆಗಳ ಜವಾಬ್ದಾರಿ. ಈಗಾಗಲೇ ಮೂರು ತಿಂಗಳ ಕಾಲಾವಕಾಶ ನೀಡಿ ನವೀಕರಿಸಲು ಅನುಮತಿಸಲಾಗಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದ ಶಾಲೆಗಳ ವಿರುದ್ಧ ನಿಯಮಗಳ ಅನುಸಾರ ಕ್ರಮ ಜರುಗಿಸಲಾಗುವುದು ಎಂದರು.
ಇದನ್ನೂ ಓದಿ...ಹಳೆಯ ವಿಗ್ರಹ ಪತ್ತೆ ವಿಚಾರ: ಶಾಲೆ-ದೇವಸ್ಥಾನ ಆಡಳಿತ ಮಂಡಳಿ ನಡುವೆ ಗುದ್ದಾಟ
ಆರ್ಟಿಇ ಅನುದಾನ ನೀಡಿಕೆ: ಸರ್ಕಾರದಿಂದ 2019-20ನೇ ಸಾಲಿಗೆ ಸಂಬಂಧಿಸಿದಂತೆ ಒದಗಿಸಲಾಗಿರುವ ಆರ್ಟಿಇ ಅನುದಾನವನ್ನು ಸಂಪೂರ್ಣವಾಗಿ ಶಾಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಆರ್ಟಿಇ ನಿಯಮಗಳ ಪ್ರಕಾರ ಶೈಕ್ಷಣಿಕ ವರ್ಷದ ಸೆಪ್ಟೆಂಬರ್ ಮತ್ತು ಜನವರಿ ತಿಂಗಳಲ್ಲಿ ಶುಲ್ಕ ಮರುಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಶಿಕ್ಷಕರ ಕಲ್ಯಾಣ ನಿಧಿಯಿಂದ ಕೆಲವು ಸೌಲಭ್ಯಗಳನ್ನು ವಿಸ್ತರಿಸುವ ಬಗ್ಗೆ ನಿಯಮಗಳ ವ್ಯಾಪ್ತಿಯಲ್ಲಿ ಪರಿಶೀಲಿಸಲಾಗುವುದು ಎಂದು ಹೇಳಿದರು.
ಪಠ್ಯ ಸಂಯೋಜನೆ ಶೀಘ್ರ: ಶಾಲಾರಂಭದ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿಗೆ ಸಂಬಂಧಿಸಿದಂತೆ ಪರೀಕ್ಷಾಭಿಮುಖವಾಗಿ ಅವಶ್ಯಕವಿರುವ ಪಠ್ಯ ವಸ್ತು ಹಾಗೂ ಶೈಕ್ಷಣಿಕ ವೇಳಾಪಟ್ಟಿ ಕುರಿತಂತೆ ಶೀಘ್ರವಾಗಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕೇಂದ್ರ ವಿತ್ತ ಸಚಿವರಿಗೆ ಪತ್ರ: ಶಿಕ್ಷಣ ಸಂಸ್ಥೆಗಳು ಮಕ್ಕಳ ಹಿತದೃಷ್ಟಿಯಿಂದ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಬ್ಯಾಂಕ್ಗಳ ಮೂಲಕ ಸಾಲ ಸೌಲಭ್ಯಗಳನ್ನು ಮಾಡಿಕೊಂಡಿದ್ದು, ಪ್ರಸಕ್ತ ವರ್ಷದಲ್ಲಿ ಒದಗಿ ಬಂದಿರುವ ದುಸ್ಥಿತಿ ಕಾರಣ ಇಎಂಐ ಮುಂದೂಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ವಿಷಯವಾದ್ದರಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಮುಖೇನ ಕೋರಲಾಗುದು ಎಂದರು.
ಇದನ್ನೂ ಓದಿ...ಸಿದ್ದರಾಮಯ್ಯ, ಕುಮಾರಸ್ವಾಮಿ ಕರ್ನಾಟಕದ ಬಫೂನ್ಗಳು: ಹೆಚ್.ವಿಶ್ವನಾಥ್
ಶಾಲೆಗಳು ಅನುದಾನ ವ್ಯಾಪ್ತಿಗೆ: 1995ರಿಂದ 2000ರ ಅವಧಿಯಲ್ಲಿ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೊಳಪಡಿಸಬೇಕೆಂಬುದು ಸಹ ಶಿಕ್ಷಣ ಇಲಾಖೆಯ ನಿಲುವಾಗಿದ್ದು, ಈ ಬಗ್ಗೆ ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದರು.