ಬೆಂಗಳೂರು: ರೈತ ಬೆಳೆ ಸಮೀಕ್ಷೆ ರಾಜ್ಯದ ಉತ್ಸವವಾಗಬೇಕು. ಬೆಳೆ ಸಮೀಕ್ಷೆಯನ್ನು ಯಶಸ್ವಿಯನ್ನಾಗಿಸಿ ಸರ್ಕಾರದ ಉತ್ಸವವನ್ನಾಗಿಸುವ ದೊಡ್ಡಮಟ್ಟದ ಸವಾಲು ಎಲ್ಲರ ಮುಂದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕೃಷಿ ಇಲಾಖೆಯ ಸಮೃದ್ಧಿ ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಜಂಟಿ ಕೃಷಿ ನಿರ್ದೇಶಕರು, ಜಿಲ್ಲಾಧಿಕಾರಿಗಳು, ಕೆವಿಕೆ ಸೇರಿದಂತೆ ಕೃಷಿ ಅಧಿಕಾರಿಗಳ ಜೊತೆ ಕೃಷಿ ಸಚಿವರು, ಸರ್ಕಾರದ ಮುಖ್ಯಕಾರ್ಯದರ್ಶಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ಬೆಳೆ ಸಮೀಕ್ಷೆ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆಯ ಕೆಲಸವೆಂದು ವರ್ಗೀಕರಿಸುವುದು ಬೇಡ. ಇದು ಸರ್ಕಾರದ ಕೆಲಸವೆಂದು ಒಗ್ಗಟ್ಟಾಗಿ ಎಲ್ಲರೂ ಪಾಲ್ಗೊಂಡು ಬೆಳೆ ಸಮೀಕ್ಷೆಯನ್ನು ಆಯಾ ರೈತರಿಂದಲೇ ಮಾಡಿಸಿ ಅಪ್ಲೋಡ್ ಮಾಡಿಸಬೇಕು. ಸ್ವಾಭಿಮಾನಿ ರೈತ ತನ್ನ ಹೊಲದ ಸಮೀಕ್ಷೆಯನ್ನು ತಾನೇ ನಡೆಸಿ ರೈತನೇ ಸರ್ಟಿಫಿಕೇಟ್ ಕೊಡುವಂತಹ ವಿಶೇಷ ಯೋಜನೆಯಿದು ಎಂದರು.
ಬೆಳೆ ಸಮೀಕ್ಷೆಗೆ ಆ್ಯಪ್
ತಾಲೂಕಿನ ಎಡಿಎಗಳು, ಸ್ಥಳೀಯ ಶಾಸಕರನ್ನು ರೈತರ ಹೊಲಕ್ಕೆ ಕರೆದುಕೊಂಡು ಹೋಗಿ ರೈತರಿಂದಲೇ ಬೆಳೆ ಸಮೀಕ್ಷೆಗೆ ಫೋಟೋ ಅಪ್ಲೋಡ್ ಮಾಡಿಸಬೇಕು. ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳು, ಪ್ರೊಫೆಸರ್‌ಗಳು, ಸಹಾಯಕ ಪ್ರೊಫೆಸರ್‌ಗಳನ್ನು ಸಹ ರೈತ ಬೆಳೆ ಸಮೀಕ್ಷೆ ಆ್ಯಪ್ ಪ್ರಚಾರಕ್ಕೆ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.
ವಿದ್ಯಾರ್ಥಿಗಳ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಕೃಷಿ ತೋಟಗಾರಿಕಾ ವಿದ್ಯಾರ್ಥಿಗಳು ರೈತರು ಬೆಳೆ ಸಮೀಕ್ಷೆ ಆ್ಯಪ್ ಡೌನ್ಲೋಡ್ ಬೆಳೆ ವಿವರ ಅಪ್ಲೋಡ್ ಮಾಡಲು ನೆರವಾಗುವಂತೆ ಹೇಳಬೇಕು. ಸಾಮಾಜಿಕ ಜಾಲತಾಣಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕು. ಸಹಕಾರಿ ಸಂಘಗಳು ಹಾಲು ಉತ್ಪಾದಕ ಸಂಘಗಳ ಪ್ರತಿನಿಧಿಗಳನ್ನು ಹಾಗೂ ಕೃಷಿ ಇಲಾಖೆಯ ಹತ್ತು ಸಾವಿರ ಅಧಿಕಾರಿಗಳನ್ನು ಬಳಸಿಕೊಂಡು ಹೆಚ್ಚೆಚ್ಚು ಬೆಳೆ ಸಮೀಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಬೆಳೆ ಸಮೀಕ್ಷೆ ಆ್ಯಪ್ ಹಾಗೂ ರೈತರೇ ತಮ್ಮ ಬೆಳೆ ಸಮೀಕ್ಷೆ ವಿವರ ದಾಖಲಿಸುವಂತೆ ಮಾಡಬೇಕು. ರೈತರೇ ನೇರವಾಗಿ ಆ್ಯಪ್‌ನಲ್ಲಿ ವಿವರ ದಾಖಲಿಸುವಂತೆ ಮಾಡಬೇಕು. ಇದು ಬೆಳೆ ಸಮೀಕ್ಷೆ ಸರ್ಕಾರದ ಹಬ್ಬವಾಗಬೇಕು. ಇದಕ್ಕಾಗಿಯೇ ಬೆಳೆ ಸಮೀಕ್ಷೆಯನ್ನು ಉತ್ಸವ-2020 ಎಂದು ಕರೆಯಲಾಗಿದೆ ಎಂದು ಸಚಿವರು ವಿವರಿಸಿದರು.
ಬೇರೆ ರಾಜ್ಯಗಳಿಗೂ ಆ್ಯಪ್ ಬಳಸಲು ವಿಸ್ತರಣೆ
ವಿಡಿಯೋ ಸಂವಾದವನ್ನುದ್ದೇಶಿಸಿ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಕಳೆದ ಮೂರು ವರ್ಷಗಳಿಂದ ತಂತ್ರಜ್ಞಾನದ ಮೂಲಕ ಬೆಳೆ ಸಮೀಕ್ಷೆ ರಾಜ್ಯದಲ್ಲಿ ಯಶಸ್ವಿಯಾಗುತ್ತಾ ಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕದ ಬೆಳೆ ಸಮೀಕ್ಷೆಗೆ ಉತ್ತಮ ಪ್ರಶಂಸೆ ದೊರೆತಿದೆ. ಕೇಂದ್ರದ ಕಾರ್ಯದರ್ಶಿಗಳಿಗೆ ರಾಜ್ಯದ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿತ್ತು. ಬೆಳೆ ಆ್ಯಪ್ ಬಳಕೆ, ಪ್ರಯೋಜನ, ರೈತರಿಗಾಗುವ ಲಾಭ, ಇಲಾಖೆಗಾಗುವ ಆರ್ಥಿಕ ಲಾಭವನ್ನು ಕಂಡು ಕೇಂದ್ರ ಸರ್ಕಾರ ಕರ್ನಾಟಕದ ಬೆಳೆ ಸಮೀಕ್ಷೆ ಆ್ಯಪ್ ಅನ್ನು ದೇಶದ ಇತರೆ ರಾಜ್ಯಗಳಿಗೂ ವಿಸ್ತರಿಸಲು ಮುಂದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರೈತರಿಗೆ ಪ್ಯಾಕೇಜ್
ತಂತ್ರಜ್ಞಾನವನ್ನು ಬಳಸಿ ಬೆಳೆ ಸಮೀಕ್ಷೆ ಮಾಡಿರುವುದು ಬಹಳ ಲಾಭದಾಯಕಾರಿಯಾಗಿದ್ದು, ತಂತ್ರಜ್ಞಾನದ ಬೆಳೆ ಸಮೀಕ್ಷೆಯಿಂದ ಸುಮಾರು 7ಲಕ್ಷ ಮೆಕ್ಕೆಜೋಳ ಬೆಳೆದ ರೈತರ ಖಾತೆಗೆ ನೇರವಾಗಿ ಸರ್ಕಾರದ ಸಹಾಯ ಧನ ವರ್ಗಾಯಿಸಲು ಅನುಕೂಲವಾಗಿದೆ. ಅದರಂತೆ ಹಣ್ಣು, ಹೂವು, ತರಕಾರಿ ಬೆಳೆದ ರೈತರಿಗೆ ಸೂಕ್ತ ಪ್ಯಾಕೇಜ್ ಘೋಷಿಸಲು ಸಹಾಯಕವಾಯಿತು ಎಂದರು.
ರೈತರು ಮನೆಯಿಂದ ಹೊರಗೆ ಹೋಗದೇ ಅವರ ಖಾತೆಗೆ ಹಣ ಜಮೆಯಾಗಲು ಈ ತಂತ್ರಜ್ಞಾನದಿಂದ ಬೆಳೆ ಸಮೀಕ್ಷೆ ನಡೆಸಲಾಗಿದೆ. ಕಳೆದ ವರ್ಷ ₹2.10 ಕೋಟಿ ಸರ್ವೆ ನಂಬರ್ಗಳನ್ನು ಸಮೀಕ್ಷೆ ನಡೆಸಲಾಗಿದೆ. ಈ ವರ್ಷ ರೈತ ಬೆಳೆ ಸಮೀಕ್ಷೆ ಆ್ಯಪ್ ಬಳಸಿ ಕಳೆದ ವರ್ಷಕ್ಕಿಂತಲೂ ಇನ್ನೂ ಹೆಚ್ಚಿನ ಬೆಳೆ ಸಮೀಕ್ಷೆ ನಡೆಸಬೇಕು ಎಂದು ವಿಜಯ್ ಭಾಸ್ಕರ್ ಸೂಚಿಸಿದರು.
ಆಗಸ್ಟ್ 24ರೊಳಗೆ ಸಮೀಕ್ಷೆ ಪೂರ್ಣ
ಕೃಷಿ ಇಲಾಖೆ ನಿರ್ದೇಶ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿ, ಬೆಳೆ ಸಮೀಕ್ಷೆ ಯಶಸ್ವಿಯಾಗುವಂತೆ ಎಲ್ಲರೂ ನೋಡಿಕೊಳ್ಳಬೇಕು. ಆಗಸ್ಟ್ 24ರೊಳಗೆ ಸಮೀಕ್ಷೆ ಪೂರ್ಣ ಹಾಗೂ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗಿನ ಎಲ್ಲಾ ಸಮಿತಿಗಳು ಸಮೀಕ್ಷೆಯ ಸಫಲತೆ ಹಾಗೂ ಪೂರ್ಣತೆಗೆ ದುಡಿಯಬೇಕು ಎಂದು ಕರೆ ನೀಡಿದರು.