ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಅಕ್ರಮ ಕಟ್ಟಡಗಳ ಸಕ್ರಮಕ್ಕೆ ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ಜೆಡಿಎಸ್ ಸದಸ್ಯರಾದ ಮಂಜುನಾಥ್ ಹಾಗೂ ಶಿವಲಿಂಗೇಗೌಡ ಅವರ ಪ್ರಶ್ನೆಗಳಿಗೆ ಉತ್ತರಿಸಿ, ಅಕ್ರಮ ಸಕ್ರಮ ಜಾರಿಯಾದರೆ ಸ್ಥಳೀಯ ಸಂಸ್ಥೆಗಳ ಕಟ್ಟಡ ನಿರ್ಮಾಣ ಸಮಸ್ಯೆ, ತೆರಿಗೆ ವಸೂಲಾತಿ, ಮೂಲ ಸೌಕರ್ಯ ಒದಗಿಸುವ ಸಮಸ್ಯೆಗಳು ಬಗೆಹರಿಯುತ್ತವೆ. ಅಕ್ರಮ ಸಕ್ರಮಕ್ಕೆ ಈಗ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆ ತೆರವುಗೊಳಿಸುವ ಕೆಲಸ ನಡೆದಿದೆ ಎಂದು ಹೇಳಿದರು.
ಅಕ್ರಮ ಸಕ್ರಮ ತಡೆಯಾಜ್ಞೆ ತೆರವುಗೊಳಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ. ಆದಷ್ಟು ಶೀಘ್ರ ಅಡ್ವೋಕೇಟ್ ಜನರಲ್ ಅವರ ಜತೆ ಚರ್ಚಿಸಿ ಈ ತಡೆಯಾಜ್ಞೆ ತೆರವುಗೊಳಿಸಲಾಗುವುದು ಎಂದರು.
ಅಕ್ರಮ ಕಟ್ಟಡಗಳ ಸಕ್ರಮಕ್ಕೆ ತಡೆಯಾಜ್ಞೆ ಇರುವುದರಿಂದ ಕಟ್ಟಡ ನಕ್ಷೆ ಮಂಜೂರಾತಿ, ಲೈಸೆನ್ಸ್ ಇವುಗಳಿಗೆ ತೊಂದರೆಯಾಗಿದೆ. ಮನೆ ಕಟ್ಟುವರು ಕಟ್ಟುತ್ತಲೇ ಇದ್ದಾರೆ. ಆದರೆ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತಿಗಳಿಗೆ ತೆರಿಗೆ ಆದಾಯ ಕಡಿಮೆಯಾಗಿದೆ. ಇವೆಲ್ಲವನ್ನು ಸರಿಪಡಿಸಲು ಅಕ್ರಮ ಸಕ್ರಮ ಜಾರಿಯಾಗಬೇಕು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಸ್ಪೀಕರ್ ತರಾಟೆ :
ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಸ್ಥಳೀಯ ಸಂಸ್ಥೆಗಳು ಆಡಳಿತದಲ್ಲಿ ಯಾವ ಹಿಡಿತ ಇಲ್ಲ ಎಂಬ ಸ್ಥಿತಿಗೆ ತಲುಪಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪೌರಾಡಳಿತ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ವಿಧಾನ ಸಭೆಯಲ್ಲಿ ಇಂದು ನಡೆಯಿತು.
ಚೇಂಜ್ ಆಫ್ ವರ್ಕ್ ಕಳುಹಿಸಿದರೆ ಯಾವಾಗ ಮಾಡಿದ್ದೀರಿ?, ಇದಕ್ಕೆ ಎಷ್ಟು ವರ್ಷ ಬೇಕು ನಿಮ್ಮ ಅಧಿಕಾರಿಗಳಿಗೆ?. ಎಷ್ಟು ವರ್ಷಗಳಿಂದ ಬಾಕಿ ಇದೆ?. ಅಧಿಕಾರಿಗಳಿಗೆ ಜವಾಬ್ದಾರಿ ಬೇಡವೇ ?, ಆಡಳಿತ ಮಾಡಬೇಕು ಎಂಬ ಇಚ್ಚಾಶಕ್ತಿ ಕಾರ್ಯದರ್ಶಿಗಳಲ್ಲಿ ಕಾಣಬೇಕಲ್ಲವೇ? ಎಂದು ಸಭಾಪತಿ ಗರಂ ಆದರು.
ಎಷ್ಟು ಸಲ ಫೈಲ್ ಅಡ್ಡಾಡಬೇಕು?:
ಪುರಸಭೆ ಕಚೇರಿಯಿಂದ ಡಿಸಿ ಆಫೀಸಿಗೆ ಎಷ್ಟು ಸಲ ಫೈಲ್ ಅಡ್ಡಾಡಬೇಕು?. ಡಿಸಿ ಕಚೇರಿಯಿಂದ ಬೆಂಗಳೂರಿಗೆ ಎಷ್ಟು ಸಲ ಅಡ್ಡಾಡಬೇಕು?. ಎಲ್ಲ ಸರಿ ಇದ್ದರೂ ಅಧಿಕಾರಿಗಳು ಬೆಂಗಳೂರಿನ ಕಚೇರಿಯಲ್ಲಿ ಕೊಕ್ಕೆ ಹಾಕಿ ಕಳುಹಿಸುತ್ತಾರೆ. ನಿಮ್ಮ ಗಮನಕ್ಕೆ ಇದು ಬರುವುದಿಲ್ಲ. ಕೆಲ ಹಂತದಲ್ಲಿ ನಡೆಯುತ್ತಿರುತ್ತದೆ. 6ನೇ ಬಾರಿ ಶಾಸಕನಾಗಿ ಆಯ್ಕೆಯಾಗಿ ಈ ಸ್ಥಾನದಲ್ಲಿ ಇದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಾದರೆ ಲಕ್ಷಾಂತರ ಜನ ಕಷ್ಟ ಪಡುವಂತಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ಪೀಕರ್ ಸಲಹೆ ನೀಡಿದರು.
ಇದಕ್ಕೂ ಮುನ್ನ ಈ ವಿಚಾರ ಪ್ರಸ್ತಾಪ ಮಾಡಿದ್ದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ನಗರ ಸಭೆಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರೋತ್ಥಾನ ಯೋಜನೆ ಮೂಲಕ ನಗರಗಳ ಅಭಿವೃದ್ಧಿಗೆ ಪ್ರಯತ್ನ ನಡೆದಿದೆ. ಈ ಯೋಜನೆ ಬರದೇ ಇದ್ದರೆ ಕೀಳು ಮಟ್ಟಕ್ಕೆ ಹೋಗುತ್ತಿತ್ತು. ನಗರರೋತ್ಥಾನ 4ನೇ ಹಂತದ ಯೋಜನೆ ತರುತ್ತೇವೆ ಎಂಬ ಆಶ್ವಾಸನೆ ಕೊಡುತ್ತಿದ್ದೀರಿ. ರಸ್ತೆ ಅಗೆದಿದ್ದಾರೆ, ಡ್ರೈನೇಜ್ ಕಾಮಗಾರಿ ಆಗಿಲ್ಲ. ನಗರಸಭೆಗೆ ಆದಾಯ ಬರುತ್ತಿಲ್ಲ. ನಾಲ್ಕನೇ ಹಂತದ ಯೋಜನೆ ಬರದೇ ಇದ್ದರೆ ನಗರಸಭೆ ಗಬ್ಬುನಾರುವ ಹಂತಕ್ಕೆ ಬರುತ್ತವೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಈಗ ಪಾಸ್ ಮಾಡಿದ್ರೆ, 2023ಕ್ಕೆ ನಾವು ವಾಪಸ್ ಪಡಿತೀವಿ: ಬಿಜೆಪಿಗೆ ಸಿದ್ದರಾಮಯ್ಯ ಎಚ್ಚರಿಕೆ