ಬೆಂಗಳೂರು : ರೈತರಿಗೆ ಈವರೆಗೂ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ರೈತರ ಹೆಸರಿನಲ್ಲಿ ಹಲವರು ಆಡಳಿತ ನಡೆಸಿದ್ದಾರೆ. ಆದರೆ, ಈಗ ರೈತರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದರು.
ವಿಕಾಸಸೌಧದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಈಗ ರೈತನಿಗೆ ಸ್ವಾತಂತ್ರ್ಯ ಸಿಕ್ಕಿದೆ. ಶ್ರಮ, ಸಮಯ, ಹಣ ವ್ಯರ್ಥ ಮಾಡಿ ರೈತ ಬೆಳೆ ಬೆಳೆದ್ರೆ ಮಾರಾಟಕ್ಕೆ ದೇಶದ ಹಲವು ಕಾನೂನುಗಳು ಅಡ್ಡಿ ಮಾಡುತಿದ್ದವು. ಅಡ್ಡಿಯಾಗುತ್ತಿದ್ದ ಕಾನೂನುಗಳನ್ನು ತೆಗೆದು ಹಾಕಿ ರೈತನಿಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಅಕ್ರಮವಾಗಿ ರಸಗೊಬ್ಬರ ಸ್ಟಾಕ್ ಮಾಡುತ್ತಿದ್ದ 140 ಜನರ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗಿದೆ. ಅಕ್ರಮ ಸ್ಟಾಕ್ ಮಾಡಿದ್ದವರ ಮೇಲೆ ರೇಡ್ ಮಾಡಿ, ಸೀಜ್ ಮಾಡ್ಲಾಗಿದೆ ಎಂದರು. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತನಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಲಭ್ಯವಾಗಿದೆ. ರೈತರ ಸಬಲೀಕರಣಕ್ಕೆ ಮೂರು ತಿದ್ದುಪಡಿ ಕಾಯ್ದೆಗಳು ಅನುಕೂಲವಾಗಲಿವೆ. ರೈತರಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಕಿಸಾನ್ ಕಾರ್ಡ್, ಸಾಯಿಲ್ ಹೆಲ್ತ್ ಕಾರ್ಡ್ ಸೇರಿ ಹಲವು ಉಪಯುಕ್ತ ಯೋಜನೆ ಜಾರಿಯಾಗಿವೆ. ಆತ್ಮನಿರ್ಭರ ಭಾರತ ಯೋಜನೆಯಡಿ ಮೂಲಸೌಕರ್ಯ ಆಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ರೈತರಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತನನ್ನು ಸಂಕೋಲೆಯಿಂದ ಬಿಡಿಸಲಾಗಿದೆ ಎಂದು ಸಮರ್ಥಿಸಿದರು. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಬೆಂಬಲ ಬೆಲೆಗೆ ಮಾರಕ ಎಂಬ ಕೂಗು ಸುಳ್ಳು.
ಯಾವುದೇ ಕಾರಣಕ್ಕೂ ಬೆಂಬಲ ಬೆಲೆ ನೀಡುವುದು ರದ್ದಾಗುವುದಿಲ್ಲ. ಎಪಿಎಂಸಿಗಳು ಸಹ ಮುಚ್ಚುವುದಿಲ್ಲ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯೂ ಸಹ ರೈತ ಸ್ವಾವಲಂಬಿಯಾಗಲು ಸಹಕಾರಿಯಾಗಿದೆ. ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ. ಕಾಂಗ್ರೆಸ್‌ನಿಂದ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.
ರಸಗೊಬ್ಬರ ಕೊರತೆ ಇಲ್ಲ : ಕೃಷಿಗೆ ರಾಸಾಯನಿಕ ಗೊಬ್ಬರಗಳ ಕೊರತೆ ಇಲ್ಲ. ಕಳೆದ ವರ್ಷಕ್ಕಿಂತ ಈ ಬಾರಿ 4.5 ಲಕ್ಷ ಮೆಟ್ರಿಕ್ ಟನ್ ಹೆಚ್ವುವರಿ ಗೊಬ್ಬರ ಪೊರೈಕೆಯಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದರು. ಯೂರಿಯಾ ಗೊಬ್ಬರ 1.7 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿಯಾಗಿ ಪೊರೈಕೆ ಮಾಡಿದ್ದೇವೆ. ಕೆಲವರು ಗೊಬ್ಬರದ ಅಭಾವ ಸೃಷ್ಟಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯತ್ನ ಮಾಡುತ್ತಿದ್ದಾರೆ. ಗೊಬ್ಬರದ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಗೊಬ್ಬರ ಪೊರೈಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಸುಮಾರು 15 ಲಕ್ಷ ಹೆಕ್ಟೇರ್ ಭೂಮಿ ಬೀಳು ಬಿದ್ದಿದೆ. ಇಂತಹ ಭೂಮಿ ಬಳಕೆಗೆ ಅನುಕೂಲವಾಗಲು ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿಯಾಗಿದೆ. ಈ ಮೂಲಕ ಕೃಷಿ ಬೆಳೆಗಳು ಹೆಚ್ಚು ರಫ್ತಿಗೆ ಉತ್ತೇಜನ ಸಿಗಲಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ದಲ್ಲಾಳಿಗಳ ಪರ ಇವೆ. ಕಾಂಗ್ರೆಸ್ ಪಕ್ಷ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿತ್ತು. ಆದರೆ, ಈಗ ಅದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಇದನ್ನು ಗಮನಿಸಿದ್ರೆ ಕಾಂಗ್ರೆಸ್ ಆರೋಪ ಎಷ್ಟು ನಾಟಕೀಯ ಎಂಬುದನ್ನು ಗಮನಿಸಬೇಕು ಎಂದು ಕಿಡಿಕಾರಿದರು.