ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಹಾಸಿಗೆಯನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಬೇಕು ಎಂದು ಆದೇಶಿಸಲಾಗಿದೆ. ಆದರೆ, ನಗರದ ಹಲವು ಖಾಸಗಿ ಆಸ್ಪತ್ರೆಗಳು ಸರ್ಕಾರದ ಆದೇಶವನ್ನು ಪಾಲಿಸುತ್ತಿಲ್ಲ. ಹೀಗಾಗಿ, ಖಾಸಗಿ ಆಸ್ಪತ್ರೆಗಳು ಸಹಕಾರ ನೀಡದಿದ್ರೆ, ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಕೆಲ ಖಾಸಗಿ ಆಸ್ಪತ್ರೆಗಳ ಧೋರಣೆ ಸರಿಯಲ್ಲ. ನಾನು ಎಲ್ಲಾ ಆಸ್ಪತ್ರೆಗಳ ಮೇಲೆ ಆರೋಪ ಮಾಡುತ್ತಿಲ್ಲ. ಆದರೆ, ಕೆಲವು ಆಸ್ಪತ್ರೆಗಳು ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಹೆಚ್ಚು ಹಣ ವಸೂಲಿ ಮಾಡಿದರೆ ಆಸ್ಪತ್ರೆ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ತಿಳಿಸಿದರು.
ಮಹಾರಾಷ್ಟ್ರದ ರೈಲುಗಳ ಐಸೋಲೇಷನ್ ಕೋಚ್ಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ವಿಚಾರವಾಗಿ ಪ್ರತಿಕ್ರಿಯಿಸಿ, ಆ ಬಗ್ಗೆ ನಮ್ಮಲ್ಲೂ ಚಿಂತನೆಯಿದೆ. ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ಆ ಹಂತಕ್ಕೆ ತಲುಪಿಲ್ಲ. ಅಗತ್ಯಬಿದ್ರೆ ಐಸೋಲೇಷನ್ ಕೋಚ್ಗಳನ್ನು ಆರಂಭಿಸುತ್ತೇವೆ ಎಂದರು.
ಬಿಬಿಎಂಪಿ ವಾರ್ ರೂಂಗೆ ಭೇಟಿ:
ಸಚಿವ ಡಾ.ಸುಧಾಕರ್ ಪಶ್ಚಿಮ ವಲಯದ ಕೋವಿಡ್ ವಾರ್ ರೂಂಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಪ್ರತಿಕ್ರಿಯಿಸಿ, ಪಶ್ಚಿಮ ವಲಯಕ್ಕೆ 6 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಹೀಗಾಗಿ, ಕೊರೊನಾ ಸೋಂಕಿತರ ಮಾಹಿತಿ, ಬೆಡ್ಗಳ ಬಗ್ಗೆ ಪರಿಶೀಲಿಸಲು ಬಂದಿದ್ದೇನೆ. ಆಪ್ತಮಿತ್ರ ಸಹಾಯವಾಣಿ ಇನ್ನಷ್ಟು ಕೆಲಸ ಮಾಡಬೇಕಿದೆ. ಸುಲಭ ರೀತಿಯಲ್ಲಿ ಜನರಿಗೆ ಚಿಕಿತ್ಸೆ ಸಿಗಬೇಕಿದೆ. ವೈದ್ಯರು ಕೂಡ ಇರ್ತಾರೆ. ಸೋಂಕಿತರಿಗೆ ಚಿಕಿತ್ಸೆ ತಡವಾಗುತ್ತಿರುವ ಬಗ್ಗೆ ವೈದ್ಯರ ಗಮನಕ್ಕೆ ತಂದಿದ್ದೇನೆ ಎಂದರು.
ಇದನ್ನೂ ಓದಿ: ಅರೇವಾಹ್!! ಬಡ ಕೂಲಿಕಾರ್ಮಿಕನಿಗೆ ಹೊಡೀತು ಲಾಟರಿ.. ರಾತ್ರೋರಾತ್ರಿ ಕೋಟ್ಯಾಧೀಶ್ವರನಾದ ಕನಸುಗಾರ..