ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿ ವಿದ್ಯಾರ್ಥಿಗಳ ಹಿತ ಬಿಟ್ಟು ಬೇರೆ ಯಾವುದೇ ಹಿಡನ್ ಅಜೆಂಡಾವಾಗಲಿ ಅಥವಾ ದುರದ್ದೇಶವಾಗಲಿ ಇಲ್ಲವೆಂದು ಡಾ. ಸಿ.ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ವಿಷಯವನ್ನು ಸಂಪೂರ್ಣ ತಿಳಿಯದೇ ಟೀಕೆ ಸರಿಯಲ್ಲ:
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಕ್ರಿಸ್ತ್ ಜಯಂತಿ ಕಾಲೇಜು ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ ಕುರಿತು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಹೊಸ ಶಿಕ್ಷಣ ನೀತಿ ಕುರಿತು ಯಾವುದೇ ಅಧ್ಯಯನ ಮಾಡದೇ ಅಥವಾ ಅದನ್ನು ಸರಿಯಾಗಿ ಗ್ರಹಿಸದೇ ಟೀಕೆ ಮಾಡುವುದು ಸರಿಯಲ್ಲ. ಶಿಕ್ಷಣ ನೀತಿಯನ್ನು ವಿರೋಧ ಮಾಡುವುದು, ದೇಶದ ಅಭಿವೃದ್ಧಿಯನ್ನು ವಿರೋಧಿಸುವುದು ಎರಡೂ ಒಂದೇ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ಇಚ್ಛೆಯನುಸಾರ ವಿದ್ಯಾಭ್ಯಾಸ:
ಇಷ್ಟು ದಿನ ನಾವು ಹೇಳಿದ್ದನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಮಕ್ಕಳ ಪರಿಪೂರ್ಣ ವಿಕಾಸಕ್ಕೆ ಅವಕಾಶ ಇರಲಿಲ್ಲ. ಆದರೆ, ಇನ್ನು ಮುಂದೆ ಅವರ ಇಚ್ಛೆಯ ವಿಷಯ ಕಲಿಯಲಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಇತರ ಯಾವುದೇ ಕ್ಷೇತ್ರವೇ ಇರಲಿ ದೇಶ ಎದುರಿಸುತ್ತಿರುವ ಪ್ರತಿಯೊಂದು ಸವಾಲಿಗೂ ಶಿಕ್ಷಣ ನೀತಿಯಲ್ಲಿ ಉತ್ತರವಿದೆ. ಯಾವುದೇ ಶಿಕ್ಷಣ ಸಂಸ್ಥೆಯೂ ಲಾಭ ಗಳಿಕೆಗಾಗಿ ಕೆಲಸ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಹೇಳಿದರು.
ಆಗಸ್ಟ್ 23ರಿಂದ ಎನ್ಇಪಿ ಅಡಿ ಪ್ರವೇಶ ಪ್ರಕ್ರಿಯೆ ಆರಂಭ:
ಇದೇ ತಿಂಗಳ 23ರಿಂದ ಹೊಸ ಶಿಕ್ಷಣ ನೀತಿಯಡಿ ಕಲಿಕೆಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಪ್ರವೇಶ ಪ್ರಕ್ರಿಯೆಗೆ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.