ಬೆಂಗಳೂರು: 9ನೇ ತರಗತಿಯಿಂದ ಪಿಯುಸಿವರೆಗೆ ಉದ್ಯಮಶೀಲತೆಯ ಬೆಳವಣಿಗೆಯನ್ನು ತಿಳಿಸುವ ಪಠ್ಯಕ್ರಮವನ್ನು ಮತ್ತು 8ನೇ ತರಗತಿಯಿಂದ ಪದವಿವರೆಗೂ ಕಡ್ಡಾಯಗೊಳಿಸಬೇಕು ಎಂದು ಕೌಶಲ್ಯ, ಉದ್ಯಮಶೀಲತೆ ಮತ್ತು ನವೋದ್ಯಮ ಕಾರ್ಯಪಡೆಯು ಶಿಫಾರಸು ಮಾಡಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಕಾರ್ಯಪಡೆಯ ಪ್ರಮುಖ ಶಿಫಾರಸುಗಳನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಈ ವಿಷಯ ತಿಳಿಸಿದರು.
ಕಾರ್ಯಪಡೆ ಅಧ್ಯಕ್ಷರೂ ಆದ ಉದ್ಯಮಶೀಲತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಅವರು ಕೊಟ್ಟ ವರದಿಯನ್ನು ಸ್ವೀಕರಿಸಿ ಮಾತನಾಡಿದ ಅಶ್ವತ್ಥನಾರಾಯಣ ಮುಂದಿನ 10 ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ, ನಿರುದ್ಯೋಗ ನಿವಾರಣೆ, ಗುಣಮಟ್ಟದ ಶಿಕ್ಷಣ ಸಾಧ್ಯವಾಗಬೇಕೆಂದರೆ ಕಲಿಕೆಯ ಹಂತದಿಂದಲೇ ಕೌಶಲ್ಯವನ್ನು ಕಲಿಸುವುದರ ಜೊತೆಗೆ ಉದ್ಯಮಶೀಲ ಮನೋಭಾವವನ್ನು ಬೆಳೆಸುವುದು ಅಗತ್ಯವಾಗಿದೆ. ಹಾಗಾಗಿ ಕಾರ್ಯಪಡೆ ಮಾಡಿರುವ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದು ಹೇಳಿದರು.
ಗ್ರಾಮಾಂತರ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಕೌಶಲ್ಯಗಳು ಯಾವ ಮಟ್ಟದಲ್ಲಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮಾದರಿ ಸಮೀಕ್ಷೆ ಕೈಗೊಳ್ಳಬೇಕು. ಜೊತೆಗೆ ಜಿಲ್ಲಾ ಮಟ್ಟದಲ್ಲಿ ಉದ್ಯಮ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಇದರಲ್ಲಿ ಹೇಳಲಾಗಿದೆ. ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಹೂಡಿಕೆದಾರರು, ಬ್ಯಾಂಕು ಮತ್ತು ಇನ್ನಿತರೆ ಹಣಕಾಸು ಸಂಸ್ಥೆಗಳಿಂದ ಸಾಫ್ಟ್ ಲೋನ್ ಒದಗಿಸಲು ವ್ಯವಸ್ಥೆ ಮಾಡುವ ಅಗತ್ಯವಿದೆ. ಇವೆಲ್ಲವುಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಅಂದು ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರಾ?: ಈಶ್ವರಪ್ಪ ರಾಜೀನಾಮೆ ಆಗ್ರಹಕ್ಕೆ ಸಿಎಂ ಮರು ಪ್ರಶ್ನೆ
ಡಿಜಿಟಲ್ ಆರ್ಥಿಕತೆಯಲ್ಲಿ ಕೌಶಲ್ಯಪೂರ್ಣ ಯುವಜನರಿಗೆ ಅಪಾರ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಪದವಿ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿಗಳಿಗೆ ಸೂಕ್ತ ಕೌಶಲ್ಯ ಕೋರ್ಸ್ಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಮಿಗಿಲಾಗಿ ಯುವಜನರನ್ನು ಭವಿಷ್ಯದ ಕೌಶಲ್ಯಗಳಲ್ಲಿ ಸನ್ನದ್ಧಗೊಳಿಸಲು ಇನ್ಫೋಸಿಸ್, ಮೈಕ್ರೋಸಾಫ್ಟ್, ಐಬಿಎಂ ಮುಂತಾದ ಕಂಪನಿಗಳಲ್ಲಿ ಇಂಟರ್ನ್-ಶಿಪ್ ಮಾಡಲು ಅವಕಾಶ ಕಲ್ಪಿಸಲಾಗುವುದೆಂದು ಸಚಿವ ಅಶ್ವತ್ಥನಾರಾಯಣ ವಿವರಿಸಿದರು.