ಬೆಂಗಳೂರು: ಇಂದು ಕೂಡಾ ನೂರಾರು ಮಂದಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಆರೋಗ್ಯ ತಪಾಸಣೆಗಾಗಿ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಜಮಾಯಿಸಿದ್ದರು.
ಮಿಜೋರಾಂ ಸೇರಿದಂತೆ ಈಶಾನ್ಯ ಭಾರತದ ಹಲವು ರಾಜ್ಯಗಳ ವಲಸೆ ಕಾರ್ಮಿಕರು ವಿಶೇಷ ರೈಲಿನಲ್ಲಿ ಹೋಗಲು ಆರೋಗ್ಯ ತಪಾಸಣೆಗಾಗಿ ಅರಮನೆ ಮೈದಾನದಲ್ಲಿ ಸಾಮಾಜಿಕ ಅಂತರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಗುಂಪು ಗುಂಪಾಗಿ ಸೇರಿದ್ದರು. ಪೊಲೀಸರು ಎಷ್ಟೇ ಹೇಳಿದರೂ ಎಚ್ಚೆತ್ತುಕೊಳ್ಳಲಿಲ್ಲ. ಅಲ್ಲದೆ ಇಲ್ಲಿ ಕೆಲಸ ಮಾಡುವ ಪಾಲಿಕೆ ಅಧಿಕಾರಿಗಳಿಗೂ ಇದು ತಲೆನೋವಾಗಿ ಪರಿಣಮಿಸಿದೆ.
ವಲಸೆ ಕಾರ್ಮಿಕರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಿರುವ ಹಿನ್ನೆಲೆ ಆನ್ಲೈನ್ನಲ್ಲಿ ಬುಕ್ ಮಾಡಿಕೊಂಡವರಿಗೆ ಮಾತ್ರ ತಮ್ಮ ರಾಜ್ಯಗಳಿಗೆ ತೆರಳಲು ಅನುಮತಿ ಸಿಕ್ಕಿದ್ದು, ಇಂದು ಮಿಜೋರಾಂಗೆ ಪ್ರಯಾಣ ಬೆಳೆಸಲಿದ್ದಾರೆ.
ಆರೋಗ್ಯ ತಪಾಸಣೆ ಹಾಗೂ ದಾಖಲೆ ಪರಿಶೀಲನೆ ನಡೆಸಿದ ಬಳಿಕ ಕಂಟೇನ್ಮೆಂಟ್ ರೈಲು ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಮೂಲಕ ಶಿಫ್ಟ್ ಆಗಲಿದ್ದಾರೆ. ಸಂಜೆ ಐದು ಗಂಟೆ ವೇಳೆಗೆ ಬೆಂಗಳೂರಿನಿಂದ ಮಿಜೋರಾಂಗೆ ವಿಶೇಷ ರೈಲು ಹೊರಡಲಿದೆ.