ಬೆಂಗಳೂರು/ಧಾರವಾಡ: ಹೈಕೋರ್ಟ್ ಸೂಚನೆಯಂತೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್‌ಗಳ ಮರುವಿಂಗಡಣೆಯ ಕುರಿತು ಮಾರ್ಗಸೂಚಿ ಕಳುಹಿಸಿಕೊಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಭಿವೃದ್ದಿ ಕಾಮಗಾರಿಗಳು ಮತ್ತು ಕ್ರೆಡಾಯ್ ಸಂಸ್ಥೆಗಳ ಸಮಸ್ಯೆಗಳು, ಕೈಗಾರಿಕಾ ಪ್ರದೇಶಗಳಲ್ಲಿ ತೆರಿಗೆ ವಿಧಿಸುವ ಕುರಿತಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ನಗರಾಭಿವೃದ್ದಿ ಸಚಿವ ಬಿ.ಎ. ಬಸವರಾಜ್ ಸಭೆ ನಡೆಸಿದರು.
ಸಭೆಯಲ್ಲಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು. ಇತ್ತೀಚೆಗೆ ಹೈಕೋರ್ಟ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡ್ ಮರುವಿಂಗಡಣೆ ಮಾಡುವಂತೆ ಸೂಚನೆಗಳನ್ನು ನೀಡಿದೆ. ಈ ಕಾರ್ಯದ ಪ್ರಾರಂಭಕ್ಕೆ ಸರಕಾರದಿಂದ ಮಾರ್ಗಸೂಚಿಗಳ ಅಗತ್ಯವಿದ್ದು, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಚಿವ ಜಗದೀಶ್ ಶೆಟ್ಟರ್ ಗಮನ ಸೆಳೆದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಗರಾಭಿವೃದ್ದಿ ಸಚಿವ ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶೇಖರವಾಗಿರುವ ಘನತ್ಯಾಜ್ಯದ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ 54 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದಕ್ಕೆ ಕೇಂದ್ರದಿಂದ ಅನುದಾನದ ಅವಶ್ಯಕತೆ ಇದ್ದು, ಕೇಂದ್ರಕ್ಕೆ ತಕ್ಷಣ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರುಗಳು ಸೂಚನೆ ನೀಡಿದರು.
ಆರ್ಯಭಟ ತಾಂತ್ರಿಕ ಪಾರ್ಕ್ನಲ್ಲಿ ಈಗಾಗಲೇ 4 ಐಟಿ ಕಂಪನಿಗಳು ತಮ್ಮ ಕಂಪನಿಗಳನ್ನು ಪ್ರಾರಂಭಿಸಲು ಮುಂದಾಗಿವೆ. ಈ ಪಾರ್ಕ್ನಲ್ಲಿ ಹಂಚಿಕೆ ಆಗದೇ ಇರುವ 10 ಎಕರೆ ಜಮೀನನ್ನು ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ದರ ನಿಗದಿಪಡಿಸಲಾಗಿದೆ. ಈ ಸಂಬಂಧ ಕಡತ ನಗರಾಭಿವೃದ್ದಿ ಇಲಾಖೆಯಲ್ಲಿದ್ದು ತಕ್ಷಣ ಅದರ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ, ಕ್ರೆಡಾಯ್ ಹುಬ್ಬಳ್ಳಿ – ಧಾರವಾಡ ಸದಸ್ಯರು ಭೂ-ಪರಿವರ್ತನೆ, ಇ-ಆಸ್ತಿ ದಾಖಲಿಸುವ ಕಾರ್ಯ ಹೀಗೆ ಹಲವು ಸಮಸ್ಯೆಗಳ ಕುರಿತು ಗಮನ ಸೆಳೆಯಲಾಯಿತು. ಇದಕ್ಕೆ ಪರಿಹಾರ ಸೂಚಿಸಿದ ಸಚಿವರು ಕೂಡಲೇ ಅಗತ್ಯವಿರುವ ಆದೇಶಗಳನ್ನು ಹಾಗೂ ಸೂಚನೆಗಳನ್ನು ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.