ಬೆಂಗಳೂರು: ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ, ವನ್ಯಜೀವಿ ಜೀವಿ ಮಂಡಳಿ ಸಭೆ ನಡೆಯಲಿದೆ. ಗದಗದ ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ವನ್ಯ ಜೀವಿಧಾಮ ಎಂದು ಘೋಷಣೆ ಮಾಡಿರುವ ಹಿಂದಿನ ಸರ್ಕಾರದ ಪ್ರಸ್ತಾವನೆಯನ್ನು ರದ್ದುಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಿಸಿರುವುದನ್ನು ರದ್ದುಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆ ಎನ್ನಲಾಗ್ತಿದೆ. ಈ ಹಿಂದೆ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಎಂದು ಹಿಂದಿನ ಮೈತ್ರಿ ಸರ್ಕಾರ ಘೋಷಣೆ ಮಾಡಿತ್ತು. ಇದೀಗ ಆ ಸ್ಥಾನಮಾನ ರದ್ದು ಮಾಡುವಂತೆ ಪ್ರಸ್ತಾವನೆ ಬಂದಿದ್ದು,ಈ ಪ್ರಸ್ತಾವನೆ ಹಿಂದೆ ಪ್ರಭಾವಿ ಗಣಿ ಕಂಪನಿಗಳ ಕೈವಾಡ ಇದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ.
ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಿದ ಮೇಲೆ ಇಲ್ಲಿ ಜಾನುವಾರುಗಳಿಗೆ ಮೇಯಲು ಅವಕಾಶ ಮಾಡಿಕೊಡ್ತಿಲ್ಲ. ಇದೇ ಕಾರಣದ ನೆಪವೊಡ್ಡಿ ಸ್ಥಳೀಯರಿಂದ ಗದಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಈ ಪ್ರದೇಶದಲ್ಲಿ ಜಾನುವಾರುಗಳಿಗೆ ಮೇಯಲು ಅವಕಾಶ ಕಲ್ಪಿಸಬೇಕು ಎಂದು ಮನವಿ ನೀಡುವ ಮೂಲಕ ಸಾರ್ವಜನಿಕರನ್ನು ಮುಂದೆ ಬಿಟ್ಟು ವನ್ಯಜೀವಿಧಾಮ ಸ್ಥಾನಮಾನ ರದ್ದತಿಗೆ ಗಣಿ ಕಂಪನಿಗಳು ಕಸರತ್ತು ನಡೆಸಿವೆ ಎನ್ನುವ ಆರೋಪ ಕೇಳಿಬಂದಿದೆ.
ಒಂದು ವೇಳೆ ಕಪ್ಪತ್ತಗುಡ್ಡಕ್ಕೆ ಕೊಟ್ಟಿರುವ ವನ್ಯಜೀವಿ ಧಾಮ ರದ್ದಾದಲ್ಲಿ ಈ ಪ್ರದೇಶದಲ್ಲಿ ಸುಲಭವಾಗಿ ಗಣಿ ಕಂಪನಿಗಳು ಗಣಿಗಾರಿಕೆ ನಡೆಸಬಹುದು ಅದಕ್ಕಾಗಿ ಜನರನ್ನು ಮುಂದೆ ಬಿಟ್ಟು ಗಣಿ ಕಂಪನಿ ಮಾಲೀಕರು ಹೊಸ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇಂದು ಈ ಪ್ರಸ್ತಾವನೆ ಕುರಿತು ಸಿಎಂ ಬಿಎಸ್ವೈ ಗೃಹ ಕಚೇರಿ ಕೃಷ್ಣಾದಲ್ಲಿ ವನ್ಯಜೀವಿ ಜೀವಿ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ವನ್ಯಜೀವಿಧಾಮ ಪ್ರಸ್ತಾವನೆ ರದ್ದಿನ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.