ಬೆಂಗಳೂರು: ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ, ಕರ್ನಾಟಕ ರಾಜ್ಯ ನಿವಾಸಿ ವೈದ್ಯರ ಸಂಘದ ವತಿಯಿಂದ ರಾಜ್ಯದ ಇಪ್ಪತ್ತು ಸರ್ಕಾರಿ ಮೆಡಿಕಲ್ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳು ಕ್ಯಾಂಡಲ್ ಲೈಟ್ ಪ್ರತಿಭಟನೆ ನಡೆಸಿದ್ದಾರೆ.
ಮೆಡಿಕಲ್ ಕಾಲೇಜುಗಳ ಶುಲ್ಕ ಮಾತ್ರ ಹೆಚ್ಚಳವಾಗಿದೆ. ಆದರೆ, ಐದು ವರ್ಷದಿಂದ ಶಿಷ್ಯವೇತನ ಹೆಚ್ಚಳವಾಗಿಲ್ಲ. ರಾತ್ರಿ-ಹಗಲು ಕೊರೊನಾ ತುರ್ತುಪರಿಸ್ಥಿತಿಯಲ್ಲಿ ಊಟ, ನಿದ್ದೆ ಬಿಟ್ಟು ಸೇವೆ ಮಾಡಿದರೂ ನಮಗೆ ಸೂಕ್ತ ಸೌಲಭ್ಯವಿಲ್ಲ. ಚಪ್ಪಾಳೆ, ಬ್ಯಾಂಡ್ ಬಾರಿಸಿ ಗೌರವ ನೀಡುವ ಬದಲು ಅಗತ್ಯಗಳನ್ನು ಪೂರೈಸಿ ಎಂದು ಸ್ನಾತಕೋತ್ತರ ವಿದ್ಯಾರ್ಥಿಗಳು, ಇಂಟರ್ನ ವಿದ್ಯಾರ್ಥಿಗಳು, ಜೂನಿಯರ್ ಡಾಕ್ಟರ್ಸ್ ಕ್ಯಾಂಡಲ್ ಹಚ್ಚಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಮನವಿ ಮಾಡಿದ್ದಾರೆ.
ಕಾಲೇಜು ಶುಲ್ಕ ಕಡಿಮೆ ಮಾಡಬೇಕು. ಶಿಷ್ಯವೇತನ ಹಾಗೂ ಪಿಜಿ ಸೀಟ್ಗಳನ್ನು ಹೆಚ್ಚಳ ಮಾಡಬೇಕು. ಕಾಲೇಜು ಶುಲ್ಕವನ್ನ 30 ಸಾವಿರದಿಂದ 1.30 ಲಕ್ಷಕ್ಕೆ ಹೆಚ್ಚಳ ಮಾಡಿದ್ದಾರೆ. ಆದರೆ, 2015 ರಿಂದ ಶಿಷ್ಯವೇತನ ಹೆಚ್ಚಳ ಮಾಡಿಲ್ಲ. ಸರ್ಕಾರ ಮನವಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಸಂಘದ ಜನರಲ್ ಸೆಕ್ರೆಟರಿ ಡಾ. ಬಾಗೇವಾಡಿ ತಿಳಿಸಿದ್ದಾರೆ.