ಬೆಂಗಳೂರು: ದರೋಡೆ, ಬೈಕ್ ಕಳ್ಳತನ ಹಾಗೂ ಚಿನ್ನ ಕಳವು ಪ್ರಕರಣ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 24 ಆರೋಪಿಗಳನ್ನು ಬಂಧಿಸಿರುವ ನಗರ ಕೇಂದ್ರ ವಿಭಾಗದ ಪೊಲೀಸರು ಒಟ್ಟು 30 ಪ್ರಕರಣಗಳನ್ನು ಪತ್ತೆ ಹಚ್ಚಿ 1.32 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ವಾಹನ ಸೇರಿ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಶೇಷಾದ್ರಿಪುರ, ವೈಯಾಲಿಕಾವಲ್, ಎಸ್.ಜೆ.ಪಾರ್ಕ್, ಕಬ್ಬನ್ ಪಾರ್ಕ್, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಹಾಗೂ ಕಳ್ಳತನ ಪ್ರಕರಣಗಳಲ್ಲಿ ಈ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 87 ಮೊಬೈಲ್ ಪೋನ್, 27 ದ್ವಿಚಕ್ರ ವಾಹನ, 340 ಗ್ರಾಂ ಚಿನ್ನ, 58 ಕೆಜಿ ಬೆಳ್ಳಿ, 7 ಕಾರು, 6.39 ಲಕ್ಷ ನಗದು ಹಾಗೂ ಆರೋಪಿಗಳ ಬ್ಯಾಂಕ್ನಲ್ಲಿದ್ದ 7.50 ಲಕ್ಷ ನಗದು ಸೇರಿ ಒಟ್ಟು 1.32 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಒಂಟಿ ಜನರೇ ಇವರ ಟಾರ್ಗೆಟ್: ಕದ್ದ ಬೈಕಿನಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವವರನ್ನು ಟಾರ್ಗೆಟ್ ಮಾಡಿಕೊಂಡು ವಿವಿಧ ಠಾಣಾ ವ್ಯಾಪ್ತಿಯಲ್ಲಿ 74 ಮೊಬೈಲ್ ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಉಸ್ಮಾನ್, ಮಹಮ್ಮದ್ ಹುಸೇನ್, ತಬ್ರೇಜ್ ಖಾನ್ ಹಾಗೂ ಜುನೈದ್ ಮತ್ತು ಇರ್ಫಾನ್ ಪಾಷಾ ಬಂಧಿತರು.
ಈ ಆರೋಪಿಗಳು ಕಬ್ಬನ್ ಪಾರ್ಕ್, ಅಶೋಕನಗರ, ಮಾಗಡಿ ರೋಡ್, ಸುದ್ದಗುಂಟೆ ಪಾಳ್ಯ, ಹೈಗ್ರೌಂಡ್ಸ್ ಹಾಗೂ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೇರಿ ನಗರದ ಹಲವು ಠಾಣಾ ವ್ಯಾಪ್ತಿಯಲ್ಲಿ ದರೋಡೆ ಮಾಡುತ್ತಿದ್ದರು. ಪ್ರತಿ ಬಾರಿ ಕಳ್ಳತನ ಮಾಡುವಾಗ ಇಬ್ಬರು ಹೊಸ ಹುಡುಗರನ್ನು ಸೇರಿಸಿಕೊಳ್ಳುತ್ತಿದ್ದರು. ಒಂದು ಮೊಬೈಲ್ ಕಳ್ಳತನ ಮಾಡಿದರೆ 500 ರೂಪಾಯಿ ಕಮಿಷನ್ ನೀಡುತ್ತಿದ್ದರಂತೆ. ಕದ್ದ ಮೊಬೈಲ್ಗಳನ್ನು ಜೆಜೆ ನಗರಕ್ಕೆ ಸಾಗಿಸಿ ಅಲ್ಲಿಂದ ಹೊರ ರಾಜ್ಯಗಳಿಗೆ ಬಿಡಿ-ಬಿಡಿಯಾಗಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಅಕ್ರಮ ಚಿನ್ನ ಸಾಗಣೆ: ಇಬ್ಬರು ಆರೋಪಿಗಳಿಂದ 90 ಲಕ್ಷ ಮೌಲ್ಯದ 1.7 ಕೆ.ಜಿ ಚಿನ್ನ ಜಪ್ತಿ