ಬೆಂಗಳೂರು: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಬ್ಯಾನ್ ಆಗಲಿದ್ದು, ಅವುಗಳನ್ನು 500 ರೂಪಾಯಿ ಬೆಲೆಯ ನೋಟುಗಳಾಗಿ ಪರಿವರ್ತನೆ ಮಾಡಿಕೊಟ್ಟರೆ ಕಮೀಷನ್ ಕೊಡುವುದಾಗಿ ಹೇಳಿದ್ದ ಆರೋಪದಲ್ಲಿ ನಾಲ್ವರನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಗೌಡ ಎಂಬುವರು ನೀಡಿದ ದೂರಿನ ಮೇರೆಗೆ ನಗರದ ನಿವಾಸಿಗಳಾದ ರವಿಕುಮಾರ್, ಅರವಿಂದ್, ಸುದರ್ಶನ್ ಹಾಗೂ ಶಿವಶಂಕರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನೋಟು ಎಣಿಸುವ ಯಂತ್ರ ಜಪ್ತಿ ಮಾಡಿಕೊಂಡಿದ್ದು, ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 25ರಂದು ಸುರೇಶ್ ಗೌಡ ಎಂಬುವರನ್ನು ಸಂಪರ್ಕಿಸಿದ ಆರೋಪಿಗಳು ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ 2 ಸಾವಿರ ರೂಪಾಯಿ ನೋಟು ಬ್ಯಾನ್ ಮಾಡಲಿದೆ. ಹೀಗಾಗಿ ನಮ್ಮ ಬಳಿಯಿರುವ 3 ಕೋಟಿ ರೂಪಾಯಿಯಷ್ಟು 2 ಸಾವಿರ ನೋಟುಗಳನ್ನು 500 ಮುಖಬೆಲೆಯ ನೋಟುಗಳಾಗಿ ಬದಲಾಯಿಸಿಕೊಟ್ಟರೆ 80 ಲಕ್ಷ ರೂಪಾಯಿ ಕಮೀಷನ್ ನೀಡುವುದಾಗಿ ಹೇಳಿದ್ದರು.
ಇದನ್ನೂ ಓದಿ: ಈ ವರ್ಷ ಅಪರಾಧ ಪ್ರಮಾಣದಲ್ಲಿ ಇಳಿಕೆ: ಸೈಬರ್, ಡ್ರಗ್ಸ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ
ಆ 3 ಕೋಟಿ ರೂಪಾಯಿ ಹಣ ಪ್ರಭಾವಿ ಹಾಲಿ ಸಚಿವರ ಹಾಗೂ ಹಿರಿಯ ಶಾಸಕರೊಬ್ಬರ ಸೇರಿದೆ ಎಂದು ಹೇಳಲಾಗುತ್ತಿದೆ. ಬ್ಲ್ಯಾಕ್ ಮನಿಯನ್ನು ವೈಟ್ ಮನಿಯಾಗಿ ಪರಿವರ್ತನೆ ಮಾಡಿಕೊಳ್ಳಲು ಆ ಪ್ರಭಾವಿ ಸಚಿವರು ಮುಂದಾಗಿದ್ದಾರಾ ಎಂದು ಅನುಮಾನಗಳು ದಟ್ಟವಾಗಿವೆ ಮೂಲಗಳಿಂದ ತಿಳಿದುಬಂದಿದೆ.
ಅರ್ಧ ಹರಿದ 10 ರೂಪಾಯಿ ನೋಟೇ ಕೋಡ್ವರ್ಡ್..!
ಸುರೇಶ್ಗೌಡ ನೀಡಿದ ಮಾಹಿತಿಯಂತೆ ಮಾರತ್ಹಳ್ಳಿ ರಸ್ತೆಯಲ್ಲಿರುವ ಕಾಫಿ ಡೇ ಶಾಪ್ ಬಳಿ ಆರೋಪಿ ರವಿಕುಮಾರ್ನನ್ನು ಮಪ್ತಿಯಲ್ಲಿ ಪೊಲೀಸರು ಭೇಟಿಯಾಗಿದ್ದಾರೆ. ನೋಟು ಬದಲಾವಣೆ ವ್ಯವಹಾರ ಬಗ್ಗೆ ಮಾತನಾಡಿಕೊಂಡಿದ್ದಾರೆ.
ಆರೋಪಿ ಹೇಳಿದಕ್ಕೆಲ್ಲಾ ಪೊಲೀಸರು ತಲೆಯಾಡಿಸಿದ್ದು, ಒಪ್ಪಂದವಾಗುತ್ತಿದ್ದಂತೆ ಕೋಡ್ ವರ್ಡ್ ರೂಪದಲ್ಲಿ ಆರೋಪಿಯು ತನ್ನ ಬಳಿಯಿದ್ದ ಹರಿದ ಅರ್ಧ 10 ರೂಪಾಯಿ ನೋಟನ್ನು ಪೊಲೀಸರಿಗೆ ನೀಡಿದ್ದಾನೆ.
ಇದನ್ನೂ ಓದಿ: 500ಕ್ಕೂ ಹೆಚ್ಚು ನಕಲಿ ಖಾತೆ.. ಕೋಟ್ಯಂತರ ರೂ. ಮೌಲ್ಯದ ಚಿನ್ನ ಅಡ.. ವಿಚಾರಣೆ ವೇಳೆ ಸತ್ಯ ಬಯಲು
ಇದಾದ ಬಳಿಕ ಮತ್ತೆ ಆರೋಪಿಗಳು ತಮ್ಮ ಬಳಿ ಮೂರು ಕೋಟಿ ರೂಪಾಯಿ ಹಣ ಇರುವ ಬಗ್ಗೆ ಗ್ರಾಹಕನಿಗೆ ನಂಬಿಕೆ ಬರಿಸಲು 2 ಸಾವಿರ ರೂಪಾಯಿ ಮುಖಬೆಲೆಯ ಕೋಟ್ಯಂತರ ರೂಪಾಯಿ ನೋಟುಗಳ ವಿಡಿಯೊ ಮಾಡಿದ್ದಾರೆ. ಈ ವಿಡಿಯೊದಲ್ಲಿ 24-12_2020 sk3917 ಬಿಳಿ ಹಾಳೆಯಲ್ಲಿ ಬರೆದು ಕೋಡ್ ತೋರಿಸಿದ್ದಾರೆ. ಗ್ರಾಹಕರ ವೇಷದಲ್ಲಿದ್ದ ಪೊಲೀಸರು ಇದನ್ನು ನಂಬಿರುವಂತೆ ನಟಿಸಿದ್ದಾರೆ.
ಇದಾದ ನಂತರ ಮಾರತ್ ಹಳ್ಳಿಯಿಂದ ಯಲಹಂಕ ಬಳಿ ಆರೋಪಿ ರವಿ ಕರೆದುಕೊಂಡು ಹೋಗಿದ್ದಾನೆ. ಇವರ ಬರುವಿಕೆಗಾಗಿ ಕಾಯುತ್ತಿದ್ದ ಆರೋಪಿಗಳಾದ ಅರವಿಂದ್, ಸುದರ್ಶನ್ ಹಾಗೂ ಶಿವಶಂಕರ್ ಎಂಬುವರನ್ನು ಭೇಟಿ ಮಾಡಿಸಿದ್ದಾರೆ. ಮಫ್ತಿಯಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಅಶೋಕ ಮಡ್ಯಾಳ ನೇತೃತ್ವದ ತಂಡ ಪಿಸ್ತೂಲ್ ತೋರಿಸಿ ಪೊಲೀಸರು ಎಂದು ಹೇಳಿ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಅಲ್ಲಿಂದ ಆರೋಪಿಗಳ ಜೊತೆಗೆ ಚಿಕ್ಕಪೇಟೆಯ ಮನೆಯೊಂದಕ್ಕೆ ಪೊಲೀಸರು ತೆರಳಿದ್ದು, ಪೊಲೀಸರ ಸೂಚನೆಯಂತೆ ಆರೋಪಿಗಳು ಡೀಲರ್ಗಳಿಗೆ ಗ್ರಾಹಕರು ಎಂದು ಹೇಳಿ ಪರಿಚಯಿಸಿದ್ದಾರೆ. ಆದರೂ ಎಚ್ಚೆತ್ತುಕೊಂಡ ಡೀಲರ್ಗಳು ಕ್ಷಣಮಾತ್ರದಲ್ಲಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.