ಬೆಂಗಳೂರು: ನಿನ್ನೆ (ಗುರುವಾರ) ರಾತ್ರಿ ಸುರಿದ ಭಾರಿ ಮಳೆಗೆ ನಗರದ ಮುಖ್ಯ ರಸ್ತೆಗಳ ಚಿತ್ರಣವೇ ಬದಲಾಗಿತ್ತು. ದ್ವಿಚಕ್ರ ವಾಹನಗಳು ಸಂಪೂರ್ಣ ಜಲಾವೃತವಾಗಿದ್ದರೆ, ಕಾರುಗಳು ಮುಕ್ಕಾಲು ಭಾಗ ಮುಳುಗಿದ್ದವು.
ಜೆಸಿ ರಸ್ತೆ ಹಾಗು ಒಳರಸ್ತೆಗಳಲ್ಲಿ ಮಳೆ ನೀರು ಹರಿದು ಹೋಗದೆ ನಿಂತಲ್ಲೇ ನಿಂತ ಕಾರಣ ಕೆರೆಯ ರೀತಿ ಕಂಡುಬಂದವು. ಈ ವೇಳೆ ಯುವಕನೋರ್ವ ರಸ್ತೆಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಈಜಿಕೊಂಡು ಹೋಗಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ರಾಜಕಾಲುವೆಗಳ ಒತ್ತುವರಿ, ಬಿಬಿಎಂಪಿಯಿಂದ ಅಸಮರ್ಪಕ ಚರಂಡಿ ನಿರ್ವಹಣೆ ಈ ರೀತಿಯ ಪರಿಸ್ಥಿತಿ ಸೃಷ್ಟಿಸಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದ 21 ಕಡೆಗಳಲ್ಲಿ ಚರಂಡಿ ನೀರಿನಿಂದ ಸಮಸ್ಯೆ ಉಂಟಾದ ಬಗ್ಗೆ ಪಾಲಿಕೆಗೆ ದೂರು ಬಂದಿವೆ. ಅವುಗಳ ವಿವರ ಹೀಗಿದೆ..
ವಲಯವಾರು ದೂರುಗಳು
- ಪೂರ್ವ ವಲಯದಲ್ಲಿ ಸಾಧಾರಣ ಮಳೆಯಾಗಿದ್ದು, ವಾರ್ಡ್ ನಂಬರ್ 117ರಲ್ಲಿ ನೀಲಸಂದ್ರ ರೋಸ್ ಗಾರ್ಡನ್ನಿಂದ ದೂರು ಬಂದಿದೆ.
- ಪಶ್ಚಿಮ ವಲಯದಲ್ಲಿ ಭಾರಿ ಮಳೆಯಾಗಿದ್ದು, ವಾರ್ಡ್ 120 ಹಾಗು ಕಾಟನ್ ಪೇಟೆಯಲ್ಲಿ ಮಳೆ ನೀರು ನುಗ್ಗಿ ಸಮಸ್ಯೆಯಾಗಿದೆ. ಈ ವಲಯದ ನಾಯಂಡ ಹಳ್ಳಿಯಲ್ಲಿ 87.5 ಮಿ.ಮೀ ಮಳೆಯಾಗಿದೆ.
- ದಕ್ಷಿಣ ವಲಯದಲ್ಲಿ ಭಾರಿ ಮಳೆಯಾದ ಬಗ್ಗೆ ವರದಿಯಾಗಿದೆ. ಏಳು ಮನೆಗಳಿಗೆ ನೀರು ನುಗ್ಗಿದೆ. ಮಿನರ್ವ ಸರ್ಕಲ್ ಜೆಸಿ ರಸ್ತೆ, ಶಂಕರಮಠ ರಸ್ತೆ ಶಂಕರಪುರ, ಟಾಟಾ ಸಿಲ್ಕ್ ಫಾರ್ಮ್ ಕೆ.ಆರ್ ರೋಡ್, ಈಜೀಪುರ, ಜರ್ನಲಿಸ್ಟ್ ಕಾಲೋನಿ ಜೆಸಿ ರಸ್ತೆ, ವಾರ್ಡ್ 165 ಸಿಟಿ ಬೆಡ್ 5ನೇ ಅಡ್ಡರಸ್ತೆ, ವಿವಿ ಪುರ ಜೈನ್ ಟೆಂಪಲ್ ಬಳಿಯ ನಿವಾಸಿಗಳಿಂದ ಬಿಬಿಎಂಪಿಗೆ ಮಳೆ ನೀರು ಮನೆಗೆ ನುಗ್ಗಿದ ದೂರುಗಳು ಬಂದಿವೆ. ವಿವಿ ಪುರಂನಲ್ಲಿ 137.0 ಮಿ.ಮೀ ಮಳೆಯಾಗಿದೆ.
- ಆರ್ಆರ್ ನಗರದಲ್ಲಿ ಸಾಧಾರಣ ಮಳೆಯಾಗಿದೆ. ಚೈತನ್ಯ ಕಾಲೋನಿಗೆ ಮಳೆ ನೀರು ನುಗ್ಗಿದೆ.
- ದಾಸರಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.
- ಮಹದೇವಪುರದಲ್ಲಿಯೂ ಧಾರಾಕಾರ ಮಳೆಯಾಗಿದ್ದು, 7ಕ್ಕೂ ಹೆಚ್ಚು ಕಡೆಗಳಲ್ಲಿ ಮಳೆನೀರು ನುಗ್ಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ದೊಡ್ಡನೆಕ್ಕುಂದಿಯಲ್ಲಿ 127.5 ಮಿ.ಮೀ ಮಳೆಯಾಗಿದೆ.
- ಯಲಹಂಕ ಹಾಗು ಬೊಮ್ಮನಹಳ್ಳಿ ವಲಯಗಳಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ಮುಂದುವರೆದ ವಾಯುಭಾರ ಕುಸಿತ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ