ಬೆಂಗಳೂರು: ನಿನಗೆ ಸಹದ್ಯೋಗಿ ಜತೆ ಇದ್ದ ಅನೈತಿಕ ಸಂಬಂಧದ ವಿಡಿಯೋ ಇದೆ ಎಂದು ಉದ್ಯಮಿಯೊಬ್ಬರಿಗೆ ಸಿಸಿಬಿ ಇನ್ಸ್ಪೆಕ್ಟರ್ ಸೋಗಿನಲ್ಲಿ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ನಾಗಸಂದ್ರ ನಿವಾಸಿ ಶ್ರೀನಿವಾಸ್ ಗದ್ದಿಗೆ ಬಂಧಿತ ಆರೋಪಿ. ಈತ ಪೀಣ್ಯದ ಚೊಕ್ಕಸಂದ್ರದಲ್ಲಿರುವ ಅರುಷ್ ಎಂಟರ್ ಪ್ರೈಸಸ್ ಎಂಬ ಫೈನಾನ್ಸ್ ಕಚೇರಿಯ ಮಾಲೀಕನಾಗಿದ್ದ. ಇದೇ ಕಚೇರಿಯಲ್ಲಿ ಯುವತಿಯೊಬ್ಬಳು ಕೆಲಸ ಮಾಡುತ್ತಿದ್ದಳು. ಈಕೆ ಉದ್ಯಮಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಶ್ರೀನಿವಾಸ್ ಗದ್ದಿಗೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾನೆ.
ಯುವತಿಯ ಹಾಗೂ ಉದ್ಯಮಿ ಖಾಸಗಿ ವಿಡಿಯೋ ಇರುವುದಾಗಿ ಉದ್ಯಮಿಗೆ ಕರೆ ಮಾಡಿ ನಾನು ಸಿಸಿಬಿ ಇನ್ಸ್ಪೆಕ್ಟರ್ ರಾಜು, ನೀನು ಯುವತಿಯ ಜತೆ ಲಾಡ್ಜ್ನಲ್ಲಿದ್ದ ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ ಎಂದು ಬೆದರಿಸಿದ್ದಾನೆ. ಬಳಿಕ ಸಿಸಿಬಿ ಇನ್ಸ್ಪೆಕ್ಟರ್ ಕರೆ ಮಾಡಿದ್ದರು ಎಂದು ಯುವತಿ ಮೂಲಕ ಉದ್ಯಮಿಗೆ ಫೋನ್ ಮಾಡಿಸಿ, ಸಿಸಿಬಿ ಇನ್ಸ್ಪೆಕ್ಟರ್ ರಾಜು ಅವರು ನಮ್ಮ ಕಚೇರಿ ಮಾಲೀಕರ ಬಳಿ ಖಾಸಗಿ ವಿಡಿಯೋ ಬಗ್ಗೆ ಹೇಳಿದ್ದಾರೆ ಎಂದು ಯುವತಿಯ ಬಳಿ ಕಥೆ ಕಟ್ಟಿಸಿದ್ದ. ಬಳಿಕ ಕೇಸ್ ಕುದಿರಿಸಿ ಕೊಡುವುದಾಗಿ ಹೇಳಿ ತಾನೇ ಮುಂದೆ ಬಂದಿದ್ದ.
ಪ್ರಕರಣ ಮುಚ್ಚಿಹಾಕಲು ಇನ್ಸ್ಪೆಕ್ಟರ್ 9 ಲಕ್ಷ ರೂ. ಹಣ ಬೇಡಿಕೆ ಇಟ್ಟಿರುವುದಾಗಿ ಉದ್ಯಮಿಗೆ ಆರೋಪಿ ಪುಂಗಿ ಬಿಟ್ಟಿದ್ದ. ಬಳಿಕ 5 ಲಕ್ಷ ರೂ. ಹಣವನ್ನು ನೀನು ಕೊಡು,1 ಲಕ್ಷ ನಾನು ಕೊಡುತ್ತೇನೆ. ಒಟ್ಟು 6 ಲಕ್ಷಕ್ಕೆ ಡೀಲ್ ಕುದಿರಿಸಿದ್ದೀನಿ ಎಂದು ಉದ್ಯಮಿ ಬಳಿ ಹಂತ ಹಂತವಾಗಿ 5 ಲಕ್ಷ ಹಣ ರೂ. ಪಡೆದಿದ್ದಾನೆ. ಕೆಲ ದಿನಗಳ ಬಳಿಕ ಸಿಸಿಬಿ ಇನ್ಸ್ಪೆಕ್ಟರ್ ಪ್ರಕರಣ ಮುಚ್ಚಿಹಾಕಲು ಮತ್ತೆ 4 ಲಕ್ಷ ಹಣ ಕೇಳಿದ್ದಾರೆಂದು ತಿಳಿಸಿದ್ದ. ಅದರಂತೆ 4 ಲಕ್ಷ ರೂ. ಕೊಡು ಎಂದು ಉದ್ಯಮಿಗೆ ಪೀಡಿಸುತ್ತಿದ್ದನ್ನು ಅನುಮಾನಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರಿಂದ ಆರೋಪಿ ಶ್ರೀನಿವಾಸ್ ಗದ್ದಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.