ಬೆಂಗಳೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ನಗರದ ಮೌರ್ಯ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಆಯೋಗದ ವರದಿ ಜಾರಿಗೆ ತರದಂತೆ ಸರ್ಕಾರಕ್ಕೆ ಪತ್ರ ಬರೆದಿರುವ ಸಿವಿ ರಾಮನ್ ನಗರ, ಮಹಾದೇವಪುರ, ಪುಲಕೇಶಿನಗರದ ಶಾಸಕರ ವಿರುದ್ಧ ನಮ್ಮ ಪ್ರತಿಭಟನೆ. ಅಲ್ಲದೇ ಪಶು ಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ್, ಕೂಡಾ ಬಹಿರಂಗವಾಗಿ ವಿರೋಧಿಸಿದ್ದು, ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕೆಂದು ಆಗ್ರಹಿಸಿದರು.
ಮಾದಿಗ ದಂಡೋರ ವೇದಿಕೆಯ ರಾಜ್ಯ ಹಿರಿಯ ಉಪಾಧ್ಯಕ್ಷ ಎಮ್.ಸಿ. ಶ್ರೀನಿವಾಸ್ ಮಾತನಾಡಿ, ಒಳಮೀಸಲಾತಿ ವರ್ಗೀಕರಣದ ವಿಷಯವಾಗಿ, ಮೀಸಲಾತಿಯಿಂದ ವಂಚಿತರನ್ನಾಗಿ ಮಾಡಲಾಗ್ತಿದೆ. 101 ಜಾತಿಗಳು ಈ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿವೆ. ಹೆಚ್ಚಿನ ರೀತಿಯಲ್ಲಿ ಸೌಲಭ್ಯಗಳು ಸ್ಪರ್ಶ್ಯ ಸಮಾಜದ ಪ್ರತಿನಿಧಿಗಳೇ ಪಡೆಯುತ್ತಿದ್ದಾರೆ. ಅದನ್ನು ಖಂಡಿಸುತ್ತೇವೆ. ಅಸ್ಪೃಶ್ಯತೆಯ ನೋವು ಅನುಭವಿಸದೇ ಇರುವವರಿಗೆ ಮೀಸಲಾತಿ ಕೊಡಬಾರದು ಎಂದು ಆಗ್ರಹಿಸಿದರು.
ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ನರಸಿಂಹ ಮಾತನಾಡಿ, 7 ವರ್ಷಗಳ ಕಾಲ ನಮ್ಮ ಸ್ಥಿತಿಗತಿ ಅಧ್ಯಯನ ಮಾಡಿರುವ ಸಮಿತಿಯ ವರದಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಎಲ್ಲ ಸರ್ಕಾರ ಬಂದಾಗಲೂ ವೋಟ್ಗೋಸ್ಕರ ನಮ್ಮನ್ನು ನೆನಪಿಸಿಕೊಳ್ಳುತ್ತದೆ ಹೊರತು, ನಮ್ಮ ಬೇಡಿಕೆ ಈಡೇರಿಸಿಲ್ಲ. ಬಹಳ ತಾಳ್ಮೆಯಿಂದ ಯಾವುದೇ ಹಾನಿಯಿಲ್ಲದೇ ಪ್ರತಿಭಟನೆ ನಡೆಸಿದ್ದೇವೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದರು.